ಮಂದಹಾಸದ ಪ್ರಭುಶಂಕರರು



ಮಂದಹಾಸದ ಪ್ರಭುಶಂಕರರು                                             
ಲೇಖನ - ಬೇಲೂರು ರಾಮಮೂರ್ತಿ

ಅಕಾಡೆಮಿ ಆಫ್ ಹ್ಯೂಮರ್ ಅರ್ಪಿಸುವ ಡಾ. ಪ್ರಭುಶಂಕರ್ ಅವರ ಸಂಸ್ಮರಣೆಯ ಹಾಸ್ಯೋತ್ಸವವು ಇದೇ ಡಿಸೆಂಬರ್ 25.12.2018 ರಂದು ಮಂಗಳವಾರ ಬೆಂಗಳೂರಿನ ಜಯನಗರದ 7ನೇ ಬ್ಲಾಕಿನಲ್ಲಿರುವ ನ್ಯಾಷನಲ್ ಕಾಲೇಜು ಆವರಣದ ಎಚ್.ಎನ್.ಕಲಾಕ್ಷೇತ್ರದಲ್ಲಿ ನಡೆಯಲಿದೆ. ಇದು 1995 ರಿಂದ ಸತತವಾಗಿ ಇದೇ ದಿನದಂದು ಇದೇ ಆವರಣದಲ್ಲಿ ನಡೆಯುತ್ತಿರುವ ಹಾಸ್ಯೋತ್ಸವ. 1995ರಲ್ಲಿ ನಾ.ಕಸ್ತೂರಿಯವರ ಸಂಸ್ಮರಣೆಯೊಂದಿಗೆ ಆರಂಭವಾದ ಈ ಹಾಸ್ಯೋತ್ಸವದಲ್ಲಿ ಕೈಲಾಸಂ, ರಾಶಿ, ಬೀಚಿ, ಗೊರೂರು, ರಾಜರತ್ನಂ, ದಿನಕರ ದೇಸಾಯಿ, ಪಾ.ವೆಂ. ಆಚಾರ್ಯ, ಪರ್ವತವಾಣಿ, ದಾಶರಥಿ ದೀಕ್ಷಿತ್, ಹೆಚ್. ಕೆ. ರಂಗನಾಥ್ ಮುಂತಾದವರ ಸಂಸ್ಮರಣೆ ನಡೆದು ಇದೀಗ 25.12.2018 ಮಂಗಳವಾರದಂದು ನಡೆಯಲಿರುವ ಹಾಸ್ಯೋತ್ಸವದಲ್ಲಿ ಮೈಸೂರಿನಲ್ಲಿ ಪ್ರೊಫೆಸರ್ ಆಗಿದ್ದು ನಾ ಕಸ್ತೂರಿಯವರ ಗರಡಿಯಲ್ಲಿ ಪಳಗಿ ಸದಭಿರುಚಿಯ ಹಾಸ್ಯವನ್ನು ಪ್ರವರ್ಧಮಾನಕ್ಕೆ ತಂದ ಡಾ. ಪ್ರಭುಶಂಕರ ಅವರ ಸಂಸ್ಮರಣೆಯೊಂದಿಗೆ ನಡೆಯಲಿದೆ. ಹಾಗೆ ಹೇಳಬೇಕೆಂದರೆ 1995 ರಲ್ಲಿ ನಡೆದ ನಾ. ಕಸ್ತೂರಿಯವರ ಸಂಸ್ಮರಣೆಯ ಹಾಸ್ಯೋತ್ಸವದಲ್ಲಿ ಅತ್ಯಂತ ಸದಭಿರುಚಿಯ ಹಾಸ್ಯವನ್ನು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಕನ್ನಡ ಜನತೆಗೆ ಪರಿಚಯಿಸಿದವರು ಡಾ. ಪ್ರಭುಶಂಕರ. ರಾಷ್ಟ್ರ ಕವಿ ಕುವೆಂಪು ಅವರ ನೇರ ಶಿಷ್ಯರಾಗಿದ್ದ ಪ್ರಭುಶಂಕರ ಅವರು ಕನ್ನಡದಲ್ಲಿ ಡಾಕ್ಟರೇಟ್ ಪಡೆದ ಪ್ರಥಮರು. ಅವರು ರಚಿಸಿದ ಕನ್ನಡದಲ್ಲಿ ಭಾವಗೀತೆ ಪ್ರೌಢ ಪ್ರಬಂಧಕ್ಕೆ ಕುವೆಂಪು ಅವರೇ ಮಾರ್ಗದರ್ಶಕರಾಗಿದ್ದರು.

ಫೆಬ್ರವರಿ 15, 1929ರಂದು ಚಾಮರಾಜನಗರದಲ್ಲಿ ಜನಿಸಿದ ಡಾ. ಪ್ರಭುಶಂಕರ ಅವರು ಪ್ರಾರಂಭದಿಂದಲೂ ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದ ಅವರ ಜೀವನ, ಸಾಧನೆ ಮತ್ತು ಬೋಧನೆಗಳಿಂದ ಪ್ರಭಾವಿತರಾದವರು. ಅವರು ಕಾಲೇಜು ಶಿಕ್ಷಣ ಮುಗಿಸಿದ್ದು ಬೆಂಗಳೂರಿನಲ್ಲಿ. ನಂತರ ಅವರು ಕುವೆಂಪು, ದೇಜಗೌ, ಕ.ವೆಂ. ರಾಘವಾಚಾರ್ ಮುಂತಾದವರ ಸೆಳೆತದಿಂದ ಮೈಸೂರು ಕಾಲೇಜಿಗೆ ಸೇರಿ ಬಿ.ಎ. ಆನರ್ಸ್ ಮತ್ತು ಎಂ.ಎ. ಪದವಿಯನ್ನು ಪಡೆದರು. ಅವರು ತೀ.ನಂ. ಶ್ರೀಕಂಠಯ್ಯ, ಜಿ.ಪಿ ರಾಜರತ್ನಂ, ಎಂ.ವಿ.ಸೀತಾರಾಮಯ್ಯ, ಡಿ.ಎಲ್.ನರಸಿಂಹಾಚಾರ್ ಮುಂತಾದ ಶ್ರೇಷ್ಠ ವಿದ್ವಾಂಸರಿಂದ ಕನ್ನಡ ಕಲಿತರು. ಹಾಗೆಯೇ ಆರ್. ಗುರುರಾಜರಾವ್, ಎಂ.ರಾಮರಾವ್ ಎಸ್, ಅನಂತನಾರಾಯಣ ಅವರುಗಳಿಂದ ಇಂಗ್ಲಿಷ್ ಕಲಿತರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಮುಂದೆ ಸುಮಾರು 17 ವರ್ಷ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕರಾಗಿದ್ದರು. ಒಂದು ವರ್ಷ ಅವರು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸಂದರ್ಶನ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಡಾ. ಪ್ರಭುಶಂಕರರಿಗೆ ಸಾಹಿತ್ಯ ಪ್ರೇರಣೆ ದೊರೆತದ್ದು ನಾ. ಕಸ್ತೂರಿಯವರಿಂದ. ಕೇರಳದಲ್ಲಿ ಹುಟ್ಟಿ, ಮದರಾಸಿನಲ್ಲಿ ಶಿಕ್ಷಣ ಮುಗಿಸಿ ಮೈಸೂರಿಗೆ ಬಂದ ಕಸ್ತೂರಿಯವರಿಗೆ ಕನ್ನಡ ಬರುತ್ತಿರಲಿಲ್ಲ. ಅವರು ಕನ್ನಡವನ್ನು ಕನ್ನಡಿಗರಿಗಿಂತ ಅದ್ಭುತವಾಗಿ ಮತ್ತು ಅತಿ ಶೀಘ್ರವಾಗಿ ಕಲಿತರು. ರಾ.ಶಿ. ನಾಮಾಂಕಿತ ಡಾ. ಎಸ್. ಶಿವರಾಂ ಅವರು ಪ್ರಾರಂಬಿಸಿದ ಕೊರವಂಜಿ ಪತ್ರಿಕೆಗೆ ಮತ್ತು ಸುಬೋಧ ರಾಮರಾಯರು ಪ್ರಾರಂಭಿಸಿದ ನಗುವ ನಂದ ಪತ್ರಿಕೆಗಳಿಗೆ ಅವರು ಲೇಖನಗಳನ್ನು ಬರೆಯಲಾರಂಭಿಸಿದರು.

ಮೈಸೂರಿನಲ್ಲಿ ಇರುವಾಗ ಕುವೆಂಪು ಅವರ ಮೆಚ್ಚಿನ ಶಿಷ್ಯರಾಗಿ ಜೀವಿತದ ಬಹುಬಾಗವನ್ನು ಕುವೆಂಪು ಅವರೊಂದಿಗೆ ಕಳೆದರು. ಕನ್ನಡದಲ್ಲಿ ಕುವೆಂಪು ಅವರ ಸಮಗ್ರ ಕೃತಿಗಳನ್ನು ಅಧ್ಯಯನ ಮಾಡಿ ಕೃತಿಗಳನ್ನು ರಚಿಸಿದರು.               ನಾ. ಕಸ್ತೂರಿಯವರ ಶಿಷ್ಯರೂ ಆಗಿದ್ದ ಪ್ರಭುಶಂಕರರು ಕಸ್ತೂರಿಯವರ ಗರಡಿಯಲ್ಲಿ ಪಳಗಿ ಸಮರ್ಥವಾಗಿ ಹಾಸ್ಯ ಹೊಮ್ಮಿಸುತ್ತಿದ್ದರು. ಅವರು ರಚಿಸಿರುವ ಮಂದಹಾಸ ಮೀಮಾಂಸೆ ಕನ್ನಡದ ಅತ್ಯುತ್ತಮ ಪ್ರಬಂಧ ಗ್ರಂಥಗಳಲ್ಲೊಂದು. ಇದರ ಜೊತೆಗೆ ಬೆರಗು, ವಿವೇಕಾನಂದ, ಎತ್ತಿಗೆ ಜ್ವರ ಎಮ್ಮೆಗೆ ಬರೆ, ( ಪ್ರಬಂಧ ) ಜೀವಜೀವದ ನಂಟು, ( ಕಾದಂಬರಿ ) ಅಂಗುಲಿಮಾಲ, ಅಮ್ರಪಾಲಿ ( ನಾಟಕಗಳು ) ಅಮೆರಿಕಾದಲ್ಲಿ ನಾನು ಮತ್ತು ಶಾಂತಿ, (ಪ್ರವಾಸ ಕಥನ), ಶ್ರೀಸಾಮಾನ್ಯರ ಶ್ರೀ ರಾಮಾಯಣ ದರ್ಶನಂ, ಕಾವ್ಯಯೋಗ ( ವಿಮರ್ಶಾ ಲೇಖನಗಳು ) ಕುವೆಂಪು, ಅಲ್ಲಮಪ್ರಭು ಪು.ತಿ.ನ. ( ಜೀವನ ಚರಿತ್ರೆ )  ಮುಂತಾದ 30 ಕೃತಿಗಳನ್ನು ರಚಿಸಿದ್ದಾರೆ.  ಅಮೆರಿಕಾದಲ್ಲಿ ನಾನು ಮತ್ತು ಶಾಂತಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಜೊತೆಗೆ ಕುವೆಂಪು ವಿದ್ಯಾವರ್ಧಕ ಟ್ರಸ್ಟಿನ ವಿಶ್ವಮಾನವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ ಮುಂತಾದುವು ಪ್ರಭುಶಂಕರ ಅವರನ್ನು ಹುಡುಕಿಕೊಂಡು ಬಂದಿವೆ. ವಿವೇಕಾನಂದ ಕೃತಿ ಶ್ರೇಣಿ ಕನ್ನಡದಲ್ಲಿ ಪ್ರಕಟವಾಗಲು ಪ್ರಭುಶಂಕರರ ಶ್ರಮ ಸಾಕಷ್ಟಿದೆ. ಗೌತಮ ಬುದ್ದನ ಕುರಿತಾದ ಪ್ರೇಮಭಿಕ್ಷು ಕೃತಿ ಹಲವಾರು ವರ್ಷ ಕಾಲೇಜುಗಳ ಪಠ್ಯ ಪುಸ್ತಕವಾಗಿತ್ತು. ಕೆಲವು ವರ್ಷಗಳ ಹಿಂದೆ ಪ್ರಭುಶಂಕರರ ಸಮಗ್ರ ಕೃತಿಗಳ ಸೂಕ್ಷ್ಮಾವಲೋಕನವೆನ್ನುವಂತೆ ಅವರ ಬೆಸ್ಟ್ ಆಫ್ ಪ್ರಭುಶಂಕರ ಕೃತಿ ಬೆಳಕು ಕಂಡು ಪ್ರಸಿದ್ಧಿ ಪಡೆದಿದೆ.

ಸದಾ ಹಸನ್ಮುಖಿ ಪ್ರಭುಶಂಕರರು ಬಾಯಿ ಬಿಟ್ಟರೆ ನಗೆ ಬಾಣಗಳು ಹೊರಹೊಮ್ಮುತ್ತಿದ್ದವು. ಅವರು ಎಂದೂ ಮುಖವನ್ನು ಗಂಟಿಕ್ಕಿಕೊಂಡವರಲ್ಲ.  ನಾ. ಕಸ್ತೂರಿಯವರು ನಿಂತ ಕಡೆ, ಕೂತ ಕಡೆ, ಹಾಸ್ಯವನ್ನು ಹೊಮ್ಮಿಸುತ್ತಿದ್ದವರು. ಅವರ ಗರಡಿಯಲ್ಲಿ ಪಳಗಿದ ಪ್ರಭುಶಂಕರರು ಕಸ್ತೂರಿಯವರನ್ನೂ ಮೀರಿಸುವ ನಗೆಗಾರರಾಗಿದ್ದು ಒಂದು ವಿಶೇಷ. ಪ್ರಭುಶಂಕರರೇ ಹೇಳುವ ಕೆಲವು ನಗೆ ತುಣುಕುಗಳು ಹೀಗಿವೆ.

ಒಮ್ಮೆ ಕಸ್ತೂರಿಯವರು ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದರು. ಪ್ರಭುಶಂಕರ ಅವರೂ ಒಬ್ಬ ವಿದ್ಯಾರ್ಥಿ. ಕಸ್ತೂರಿಯವರು ಕ್ಲಾಸಿನ ಕಡೆ ನೋಡಿಕೊಂಡು ಪಾಠ ಮಾಡುವಾಗ ಒಬ್ಬ ವಿದ್ಯಾರ್ಥಿ ತೂಕಡಿಸುತ್ತಿರುವುದು ಕಸ್ತೂರಿಯವರ ಗಮನಕ್ಕೆ ಬಂದು ಪ್ರಭುಶಂಕರ ಅವರ ಕಡೆ ನೋಡಿ, ಏಯ್ ಪ್ರಭುಶಂಕರ ಅವನನ್ನು ಎಬ್ಸೋ ಅಂದರು. ಅದಕ್ಕೆ ಪ್ರಭುಶಂಕರ ಅವರು ನಾನು ಎಬ್ಸಲ್ಲ ಸರ್, ಅವನು ಇಷ್ಟು ಚನ್ನಾಗಿ ನಿದ್ದೆ ಮಾಡುವಂತೆ ಪಾಠ ಮಾಡಿದವರು ನೀವು, ನೀವೇ ಎಬ್ಬಿಸಿ ಎಂದಾಗ ಇಡೀ ಕ್ಲಾಸಿನಲ್ಲಿ ನಗೆ ಚಿಮ್ಮಿತ್ತು.

ಒಬ್ಬ ಕುಡುಕನಿಗೆ ಕುಡಿಯಲು ದುಡ್ಡು ಸಿಗದೇ ನಿರಾಶನಾಗಿ ಹೋಗುತ್ತಿದ್ದಾಗ ಒಂದು ಕಡೆ ದೇವಸ್ಥಾನವೊಂದು ಕಂಡಿತು. ಅಲ್ಲಿಗೆ ಹೋಗಿ ನೋಡಿದಾಗ ರಾಮ ದೇವರ ಹಣೆಯ ಮೇಲೆ ಬೆಳ್ಳಿಯ ನಾಮವಿದ್ದಿತು. ಯಾರೂ ಇಲ್ಲ ಅಂದು ಖಚಿತಪಡಿಸಿಕೊಂಡು ಕುಡುಕ ಆ ಬೆಳ್ಳಿಯ ನಾಮವನ್ನು ಕದ್ದುಕೊಂಡು ಹೋಗಿ ಅಂಗಡಿಗೆ ಮಾರಿ ಅದರಿಂದ ಬಂದ ದುಡ್ಡಿನಿಂದ ಕಂಠ ಪೂರ್ತಿ ಕುಡಿದ. ಕುಡಿದವನು ಹಾಡಿದ ಏನಂತ. ಓ ರಾಮ, ನೀ ನಾಮಮು ಎಂಥಾ ರುಚಿರಾ

ಒಮ್ಮೆ ಹೊರದೇಶದಲ್ಲಿ ಒಂದು ಹೆಣ್ಣಿಗೆ ಹೆರಿಗೆ ಆಗಬೇಕಿತ್ತು. ಆಸ್ವತ್ರೆಗೆ ಸೇರಿಸಿದಾಗ ಅಲ್ಲಿದ್ದದ್ದು ಅನನುಭವಿ ವೈದ್ಯರು. ಅವರೇ ಧೈರ್ಯದಿಂದ ನಾನು ಹೆರಿಗೆ ಮಾಡಿಸುತ್ತೇನೆ ಎಂದರು. ಅಂತೂ ಇಂತೂ ಹೆರಿಗೆ ಆಯಿತು. ಅವಳಿ ಜವಳಿ ಮಕ್ಕಳು. ಆದರೆ ಒಂದು ಮಗು ತೀರ ಬಿಳುಪು ಇನ್ನೊಂದು ಮಗು ಅಷ್ಟೇ ಕಪ್ಪು. ತಾಯಿ ಅಚ್ಚರಿಯಿಂದ ಇದೇಕೆಂದು ಕೇಳಿದಳು. ಡಾಕ್ಟರಲ್ಲಿ ಉತ್ತರ ಇರಲಿಲ್ಲ. ಇದರಲ್ಲಿ ನನ್ನ ತಪ್ಪು ಏನಾದರೂ ಇರಬಹುದು ಅಂತ ಗಾಬರಿಗೊಂಡ. ಆಕೆಯ ನೆಂಟರಿಷ್ಟರೆಲ್ಲಾ ಬಂದು ಒಂದೇ ಉಸಿರಿನಲ್ಲಿ ಇದೇಕೆ ಹೀಗೆ ಎಂದು ಕೇಳಿದಾಗ ಡಾಕ್ಟರಿಗೆ ಏನೂ ಬದಲಿ ಉತ್ತರ ಕೊಡಲು ಆಗದೇ ಕಡೆಗೆ ನೋಡಿ ಒಂದು ಒರಿಜಿನಲ್ಲು ಇನ್ನೊಂದು ಕಾರ್ಬನ್ ಕಾಪಿ ಅಂದುಬಿಟ್ಟರು.

ಒಂದು ಸಾರಿ ನಾ. ಕಸ್ತೂರಿಯವರು ಪ್ರಭುಶಂಕರರನ್ನು ಕರೆದು ಪ್ರಭುಶಂಕರ ಇವತ್ತು ಪೇಪರಿನಲ್ಲಿ ನನ್ನ ಹೆಸರು ಬಂದಿದೆ ಎಂದರು. ಪ್ರಭುಶಂಕರ ಅವರು ನಾನು ಇವತ್ತು ಪೇಪರು ಓದಿದೆ. ನಿಮ್ಮ ಹೆಸರು ಕಾಣಲಿಲ್ವಲ್ಲ ಅಂದರೆ ಎಲ್ಲಿ ಪೇಪರ್ ತಗೊಂಡು ಬಾ. ಐದನೇ ಪುಟ ನಾಲ್ಕನೇ ಕಾಲಂ ಓದು ಅಂದರು. ಪ್ರಭುಶಂಕರ ಅವರು ಓದುತ್ತಾ, ನೆನ್ನೆ ಮಹಾರಾಜಾ ಕಾಲೇಜಿನಲ್ಲಿ ಒಂದು ಸುಂದರ ಸಮಾರಂಭ ನಡೆಯಿತು. ಅದರಲ್ಲಿ ಕುವೆಂಪು, ತೀ.ನಂ. ಶ್ರೀಕಂಠಯ್ಯನವರು, ಬಿ.ಎಂ. ಶ್ರೀಕಂಠಯ್ಯನವರು, ಹಾಗೂ ಇನ್ನೂ ಮುಂತಾದವರು ಅಂತ ಪ್ರಭುಶಂಕರ ಅವರು ಓದುತ್ತಿದ್ದಂತೆ ಕಸ್ತೂರಿಯವರು ಗಟ್ಟಿಯಾಗಿ ಇನ್ನೂ ಮುಂತಾದವರು ಅಂದ್ಯಲ್ಲ ಅದು ನಾನೇ ಅಂದರು.

ಒಂದು ಸಾರಿ ಅಮೆರಿಕಾದಲ್ಲಿ ಒಬ್ಬಳು ಮಹಿಳೆ ತನ್ನ ಗಂಡನ ಮೇಲೆ ದೂರು ಕೊಟ್ಟಳು. ಏನೆಂದರೆ ನನ್ನ ಗಂಡ ನನ್ನನ್ನು ಹೇಸರಗತ್ತೆ ಅಂತ ಕರೆದ ಅಂತ. ಯಾವಾಗ ಅಂತ ಕೇಳಿದರೆ ಇಪ್ಪತ್ತು ವರ್ಷಗಳ ಹಿಂದೆ ಅಂದಳು. ಸ್ಟೇಷನ್ನಿನವರು ಏನ್ ಮೇಡಂ ಇಪ್ಪತ್ತು ವರ್ಷಗಳ ಹಿಂದೆ ಹೇಸರಗತ್ತೆ ಅಂತ ಕರೆದಿದ್ದಕ್ಕೆ ಇವತ್ತು ಬಂದು ದೂರು ಕೊಡ್ತಿದೀರ ಅಂತ ಕೇಳಿದ್ದಕ್ಕೆ ಆ ಮಹಿಳೆ ಹೌದು, ಆದರೆ ನಾನು ಹೇಸರಗತ್ತೆ ನೋಡಿದ್ದು ಇವತ್ತೇ ಅಂದಳು.

ಒಬ್ಬ ಜಿಪುಣ ಇದ್ದ. ಅವನು ಒಂದು ದಿವಸ ಹೆಂಡತಿಯೊಂದಿಗೆ ಮಾರ್ಕೆಟ್ಟಿಗೆ ಹೋಗಿದ್ದ. ಅಲ್ಲಿ ಒಂದು ಅಂಗಡಿ ಮುಂದೆ ಇಟ್ಟಿದ್ದ ಷೋಕೇಸಿನಲ್ಲಿ ಒಂದು ಹೆಣ್ಣು ಬೊಂಬೆಗೆ ಉಡಿಸಿದ್ದ ರೇಷ್ಮೆ ಸೀರೆ ಕಂಡು ಹೆಂಡತಿಗೆ ಆಸೆಯಾಗಿ ನನಗೆ ಆ ಸೀರೆ ಕೊಡಿಸಿ ಎಂದಳು. ಈಗ ನನ್ನ ಕುತ್ತಿಗೆಗೆ ಬಂತು ಅಂತ ಜಿಪುಣ ಗಾಬರಿಯಿಂದ ನೋಡು ಸಾರ್ವಜನಿಕವಾಗಿ ಚನ್ನಾಗಿ ಕಾಣೋ ವಸ್ತುಗಳನ್ನು ನಾವು ತಗೊಂಡು ಹೋಗಿ ಮನೇಲಿ ಇಟ್ಕೊಬಾರದು. ಈ ಸೀರೆನೂ ಹಾಗೇನೇ. ಯಾಕೇಂದರೆ ಚಾಮುಂಡಿ ಬೆಟ್ಟ, ಲಲಿತ ಮಹಲ್ ತರಹ ಈ ಸೀರೆ ಕೂಡಾ ನೋಡೋಕೆ ಎಲ್ರಿಗೂ ಸಿಗಬೇಕು ಅಂದು ಮೆತ್ತಗೆ ಹೆಂಡತಿಯನ್ನು ಅಲ್ಲಿಂದ ಹೊರಡಿಸಿಕೊಂಡು ಬಂದ.

ಕುತೂಹಲ ಎನ್ನೋದು ಮಹಿಳೆಯರಲ್ಲಿ ಹೆಚ್ಚು ಎನ್ನುತ್ತಾರೆ ಪ್ರಭುಶಂಕರರು. ಅದಕ್ಕೆ ಒಂದು ಉದಾಹರಣೆಯನ್ನೂ ಕೊಡುತ್ತಾರೆ. ಒಮ್ಮೆ ಅಮೆರಿಕನ್ ಮಹಿಳೆಯೊಬ್ಬರು ಮೃಗಾಲಯಕ್ಕೆ ಹೋಗಿದ್ದರು. ಅಲ್ಲಿ ಒಂದು ನೀರಾನೆಯನ್ನು            (ಹಿಪ್ಪೋಪಟಮಸ್) ತೀವ್ರ ಕುತೂಹಲದಿಂದ ನೋಡುತ್ತಾ ನಿಂತಿದ್ದರು. ಅವರಿಗೆ ಎಷ್ಟೊಂದು ಅಚ್ಚರಿಯಾಗಿತ್ತು ಎಂದರೆ ಅಲ್ಲಿದ್ದ ಕಾವಲುಗಾರನನ್ನು ಕರೆದು ಅಯ್ಯಾ ಇದರ ತೂಕ ಎಷ್ಟಿರಬಹುದು ಅಂತ ಕೇಳಿದರು. ಕಾವಲುಗಾರ ಈಯಮ್ಮನಿಗೆ ಏಕೆ ಅಂತ ತಿರಸ್ಕಾರದ ಧ್ವನಿಯಿಂದ ಇರಬಹುದು ಒಂದು ಎರಡು ಸಾವಿರ ಕೆಜಿ ಅಂದ. ಮಹಿಳೆ ಹುಬ್ಬೇರಿಸಿ ಇನ್ನೊಂದು ಪ್ರೆಶ್ನೆ ಹಾಕಿದಳು. ಅಪ್ಪಾ ಇದು ಗಂಡೋ ಹೆಣ್ಣೊ. ಕಾವಲುಗಾರ ಮಹಿಳೆ ಕಡೆ ಮತ್ತೆ ಬೇಜಾರಿನಿಂದ ನೋಡಿ ಈ ಕುತೂಹಲ ಇರಬೇಕಾದದ್ದು ಇನ್ನೊಂದು ನೀರಾನೆಗೇ ಹೊರತು ನಿಮಗಲ್ಲ ಅಂದು ಹೊರಟುಹೋದ.

ಜಿಪುಣರ ದಾನ. ಅತ್ಯಂತ ದಾನಿಗಳು ಯಾರು ಎಂದರೆ ಜಿಪುಣರು ಅಂತ ಹೇಳಬಹುದು ಅಂದು ಪ್ರಭುಶಂಕರರು ಈ ಪ್ರಸಂಗವನ್ನು ವಿವರಿಸುತ್ತಾರೆ. ಒಮ್ಮೆ ಮದನ ಮೋಹನ ಮಾಳವೀಯರು ಒಮ್ಮ ಶೇಠ್‍ಜೀ ಮನೆಗೆ ದಾನ ಬೇಡಲು ಹೋದರು. ಮಾಳವೀಯರು ಮಾಡುತ್ತಿರುವ ಕೆಲಸ ಉದಾತ್ತವಾದದ್ದು ಅನಿಸಿ ಶೇಠ್ ತನ್ನ ಮಗನನ್ನು ಕರೆದು ಚೆಕ್ ಬುಕ್ಕ ತರಲು ಹೇಳಿದರು. ಆಗ ಮನೆಯಲ್ಲಿ ಮಂದ ಬೆಳಕಿತ್ತು. ಮಗ ಮೇಣದ ಬತ್ತಿ ಹೊತ್ತಿಸಿದ. ಶೇಠ್ ಮಗನ ಕಡೆ ನೋಡಿ ಇನ್ನೂ ಬೆಳಕಿರುವಾಗಲೇ ಮೇಣದ ಬತ್ತಿ ಹೊತ್ತಿಸಿ ದಂಡ ಮಾಡುತ್ತೀಯ. ಅದನ್ನು ಆರಿಸು ಎಂದರು. ಮಗ ಆರಿಸಿದ. ಚೆಕ್ ತೆಗೆದುಕೊಂಡು ಹೊರಡುವ ಮುನ್ನ ಮಾಳವೀಯರು ಶೇಠ್‍ಜೀ ನೀವು ನನಗೆ ಕೊಟ್ಟಿದ್ದು ಒಂದು ಲಕ್ಷ ರೂಪಾಯಿಗಳು. ಆದರೆ ಮೇಣದ ಬತ್ತಿ ಹೊತ್ತಿಸಿದ್ದಕ್ಕೆ ಮಗನನ್ನು ಬೈದಿರಲ್ಲ, ಎಷ್ಟು ಮಹಾ ಖರ್ಚು ಆಗಿದ್ದೀತು ಅಂತ ಕೇಳಿದಾಗ ಶೇಠ್ನಾನು ಹಾಗೆ ಉಳಿಸಿದ್ದಕ್ಕೇ ಇಂದು ನಿಮಗೆ ಒಂದು ಲಕ್ಷ ರೂಪಾಯಿ ಕೊಡೋಕೆ ಆಗಿದ್ದು ಎಂದನಂತೆ.

ಕಪ್ಪು ಜನಾಂಗಕ್ಕೆ ಸೇರಿದ ಒಬ್ಬ ಟ್ಯಾಕ್ಸಿ ಡ್ರೈವರ್ ಸದಾ ಮಂದಹಾಸದಿಂದಿರುತ್ತಿದ್ದ. ಏನಿದರ ಗುಟ್ಟು ಅಂತ ಕೇಳಿದರೆ ನಾನು ಆನಂದದ ಸ್ಥಿತಿಯನ್ನು ಮುಟ್ಟಿದ್ದೇನೆ. ನನ್ನ ಪಾಲಿಗೆ ಏನು ಉದ್ಯೋಗ ಬಂದಿದೆಯೋ ಅದರಿಂದ ನನಗೆ ತೃಪ್ತಿ ಇದೆ. ಅದು ನನಗೆ ಸುಖ ಸಂತೋಷ ಎಲ್ಲವನ್ನೂ ನೀಡಿದೆ. ನಾನು ಏನಾಗಿದ್ದೇನೆಯೋ ಅದು ನನಗೆ ಅತ್ಯಂತ ತೃಪ್ತಿ ತಂದಿದೆ ಹೀಗಾಗಿ ಮಂದಹಾಸ ನನ್ನ ಮುಖದಲ್ಲಿ ಶಾಶ್ವತವಾಗಿ ಮನೆ ಮಾಡಿದೆ.

ಮದರ್ ತೆರೇಸಾ ಮುಖದಲ್ಲಿ ಎಂಥಾ ನಗುವಿತ್ತು. ಮಗುವನ್ನು ಎತ್ತಿಕೊಳ್ಳುವಾಗ, ಅನಾಥರನ್ನು ಸಂರಕ್ಷಿಸುವಾಗ, ಬಡಬಗ್ಗರಲ್ಲಿ ಮಾತಾಡುವಾಗ ಆಕೆ ಸೂಸುತ್ತಿದ್ದ ನಗೆ ಎಂಧದು. ಅವರ ಆಶ್ರಮ ಇದ್ದುದು ಗ್ವಾಟೆಮಾಲದ ಅಂಗಡಿ ಬೀದಿಯಲ್ಲಿ. ಅಲ್ಲಿನ ಮೇಯರ್ ಒಂದು ಸಾರಿ ಈ ಅಂಗಡಿ ಬೀದಿ ತುಂಬಾ ಜನನಿಬಿಡ. ಅದಕ್ಕೆ ನಿಮಗೆ ವಿಶಾಲವಾದ ಜಾಗ ಕೊಡುತ್ತೇನೆ. ಅಲ್ಲಿ ನಿಮ್ಮ ಆಶ್ರಮ ಕಟ್ಟಿಕೊಳ್ಳಬಹುದು ಎಂದರೆ ತೆರೇಸಾ ಇದು ಅಂಗಡಿ ಬೀದಿ, ನಮ್ಮದೂ ಅಂಗಡಿಯೇ ನಾವು ಇಲ್ಲಿ ಪ್ರೀತಿ, ಪ್ರೇಮ, ಶಾಂತಿ, ನೆಮ್ಮದಿ, ಸುಖ ಮಾರುತ್ತೇವೆ ಎಂದರು.

ಸ್ಕಾಟ್‍ಲ್ಯಾಂಡಿನ ಜನ ತುಂಬಾ ಜಿಪುಣರಂತೆ. ಒಂದು ಸಾರಿ ಒಬ್ಬ ಜಿಪುಣನಿಗೆ ವಿಮಾನದಲ್ಲಿ ಹಾರಾಡಬೇಕು ಅಂತ ಆಸೆಯಾಯಿತಂತೆ. ಆದರೆ ದುಡ್ಡು ಖರ್ಚಾಗುತ್ತಲ್ಲ ಅಂತ ಯೋಚನೆ. ಒಬ್ಬ ಸ್ಕಾಚ್‍ಮೆನ್ ತನ್ನ ಕಲಿಕೆಯ ವಿಮಾನದಲ್ಲಿ ದಿನಾ ಹಾರಾಟ ನಡೆಸುತ್ತಿದ್ದ. ಅವನ ಬಳಿ ಜಿಪುಣ ತನ್ನ ಆಸೆಯನ್ನು ತೋಡಿಕೊಂಡ. ಅವನು ನೋಡಪ್ಪಾ ನನ್ನದು ಕಲಿಕೆಯ ವಿಮಾನ ಹುಷಾರಾಗಿರಬೇಕು. ನಾಳೆ ಬೆಳಗ್ಗೆ ಬಾ ಅಂದ. ಜಿಪುಣನಿಗೆ ಖುಷಿಯಾಯಿತು. ಮೆತ್ತಗೆ ನನ್ನ ಹೆಂಡತಿಯನ್ನೂ ಕರೆತರಲೇ ಅಂದ. ಸ್ಕಾಚ್ ಮೆನ್ ಕರ್ಕೊಂಡು ಬಾ ಅಂದ. ಮರುದಿನ ಜಿಪುಣ ದಂಪತಿಗಳು ವಿಮಾನ ಹಾರಾಟಕ್ಕೆ ಸಿದ್ದವಾದರು. ಹಾರಾಟಕ್ಕೆ ಮುನ್ನ ಸ್ಕಾಚ್‍ಮೆನ್ ನೋಡಪ್ಪಾ ನನ್ನದು ಕಲಿಕೆಯ ವಿಮಾನ. ಅದು ಹಾರುವಾಗ ತುಂಬಾ ಜೋಲಾಡುತ್ತದೆ, ವಾಲಾಡುತ್ತದೆ, ಮೇಲೆ ಹೋಗಿ ಸರಕ್ಕನೆ ಕೆಳಗಿಳಿಯುತ್ತದೆ. ಜೋಲಿ ಹೊಡೆಯುತ್ತದೆ. ಆಗ ನೀನಾಗಲೀ ನಿನ್ನ ಹೆಂಡತಿಯಾಗಲೀ ಕಿರುಚಿ ಗಲಾಟೆ ಮಾಡಬಾರದು. ಹಾಗೆ ಮಾಡಿದರೆ 25 ಪೌಂಡ್ ದಂಡ ಕೊಡಬೇಕಾಗುತ್ತದೆ ಅಂದ. ಜಿಪುಣ ಒಪ್ಪಿದ. ಸುಖವಾದ ವಿಮಾನ ಹಾರಾಟ ನಡೆಯಿತು. ಸ್ಕಾಚ್‍ಮೆನ್ ಪರವಾಗಿಲ್ಲಯ್ಯ ಬಹಳ ಧೈರ್ಯವಾಗಿ ಕೂತಿದ್ದೆ ಎಂದ. ಅದಕ್ಕೆ ಜಿಪುಣ ಧೈರ್ಯ ಅಲ್ಲ ಸ್ವಾಮಿ ಭಯ. ಸ್ವಲ್ಪ ಚೀರಿದರೂ 25 ಪೌಂಡ್ ದಂಡ ಕೊಡಬೇಕಾಗುತ್ತದೆ ಎಂದಿದ್ದರಲ್ಲ ಅದಕ್ಕೆ ನನ್ನ ಹೆಂಡತಿ ವಿಮಾನದಿಂದ ಬಿದ್ದಾಗಲೂ ನಾನು ಬಾಯಿ ಮುಚ್ಚಿಕೊಂಡಿದ್ದೆ ಎಂದ. ಜಿಪುಣ ತನ ಹೀಗೀ ಇರಬಹುದೇ

ಒಬ್ಬ ಫೋಟೋಗ್ರಾಫರ್ ತನ್ನ ಸ್ಟುಡಿಯೋದಲ್ಲಿ ನಾಲ್ಕು ಜನರ ಒಂದು ಗುಂಪಿನ ಫೋಟೋ ಹಾಕಿಕೊಂಡಿದ್ದ. ಇವರು ಯಾರು ಎಂತ ಕೇಳಿದರೆ ನನಗೆ ಕೆಲಸ ಕೊಡದೇ ಉಪಕಾರ ಮಾಡಿದವರು. ಅವರು ಕೆಲಸ ಕೊಟ್ಟಿದ್ದರೆ ನಾನು ಎಲ್ಲೋ ಒಂದು ಸರ್ಕಾರಿ ಕಛೇರಿಯಲ್ಲಿ ಗುಮಾಸ್ತನಾಗಿ ಇರಬೇಕಾಗಿತ್ತು. ಅವರು ಕೆಲಸ ಕೊಡದೇ ನನಗೆ ಉಪಕಾರ ಮಾಡಿದ್ದಾರೆ ಎಂದ. ಸಂದರ್ಶನಕ್ಕೆ ಹೋದಾಗ ನೀವು ಬ್ರಾಹ್ಮಣರೇ ಅಂತ ಕೇಳಿ ನಂತರ ಈ ಕೆಲಸ ನಿಮಗೆ ಸಿಗೋದಿಲ್ಲ ಅಂದರು. ಸಿಂಗಣ್ಣ ಹೊರಗೆ ಬಂದು ನಿಮ್ಮ ಫೋಟೋ ತೆಗೆಯಬಹುದೇ ಅಂತ ಅನುಮತಿ ಪಡೆದು ಫೋಟೋ ತೆಗೆದು ಬಂದ.

ಇಂಥಾ ಪ್ರಖಾಂಡ ಹಾಸ್ಯ ಸಾಹಿತಿ ಪ್ರಭುಶಂಕರರು ನಮ್ಮನ್ನಗಲಿದ್ದು 8.4.2018 ರಂದು 
ಡಾ.ಪ್ರಭುಶಂಕರ



ಪ್ರಭುಶಂಕರರ ನುಡಿಗಳು

ಪ್ರಪಂಚದಲ್ಲಿ ದು:ಖ ಇದೆ. ನೀನಿಲ್ಲದೆಯೂ ಇದೆ. ನೀನಿದ್ದಿದ್ದರಿಂದಲೂ ಇದೆ. ಆದರೆ ಈ ದು:ಖವನ್ನು ಹೆಚ್ಚಿಸುವ ಹಕ್ಕು ನಿನಗಿಲ್ಲ. ಅದನ್ನು ಕಡಿಮೆ ಮಾಡುವ ಯೋಗ್ಯತೆ ನಿನಗೆ ಇದೆಯೋ ಇಲ್ಲವೋ ಅನುಮಾನ. ಆದರೆ ಅದನ್ನು ಹೆಚ್ಚಿಸದೇ ಇರುವ ಶಕ್ತಿ ನಿನಗಿದೆ. ಅದಕ್ಕೇ ನಿನ್ನ ಮುಖಕ್ಕೆ ಮಂದಹಾಸವನ್ನು ಅಂಟಿಸಿಕೋ

ಒಬ್ಬಳು ವಿಧವೆ ಕ್ಷೌರದ ನಾಗನಿಗೆ ಬರಹೇಳಿದಳಂತೆ. ಒಬ್ಬರಾದ ಮೇಲೊಬ್ಬರಂತೆ ಆರು ಜನ ಹೋಗಿ ಕರೆದರೂ ನಾಗ ಬರಲಿಲ್ಲವಂತೆ. ಆಗ ವಿಧವೆ ಬೇಜಾರು ಮಾಡಿಕೊಂಡು ಯಾರು ಕರೆದರೂ ನಾಗ ಬರುತ್ತಿಲ್ಲ. ನಮ್ಮ ಯಜಮಾನರು ಇದ್ದಿದ್ದರೆ ಎರಡೇ ನಿಮಿಷದಲ್ಲಿ ಕರೆದುಕೊಂಡು ಬರುತ್ತಿದ್ದರು.

ಒಬ್ಬರ ಮನೆಯಲ್ಲಿ ಅಸಂಖ್ಯ ಪಾದರಕ್ಷೆಗಳನ್ನು ಕಂಡು ಪ್ರಭುಶಂಕರರು ಹೇಳಿದ್ದು. ಅಲ್ಲಯ್ಯಾ ನಿಮ್ಮ ಮನೆ ಪಕ್ಕದಲ್ಲಿ ರಾಘವೇಂದ್ರ ಸ್ವಾಮಿ ದೇವಸ್ಥಾನ ಪ್ರಾರಂಭವಾಗಿ ಇನ್ನೂ ಎರಡು ತಿಂಗಳಾಗಿಲ್ಲ. ಆಗಲೇ ಇಷ್ಟೊಂದು ಜೊತೆ ಚಪ್ಪಲಿಗಳನ್ನು ಹೇಗೆ ಸಂಗ್ರಹ ಮಾಡಿದೆ.

ದೇವರು ಮೂಗನ್ನು ಮಾಡಿದ ಮನುಷ್ಯ ನಷ್ಯವನ್ನು ಮಾಡಿದ. ನಶ್ಯವನ್ನು ಮನುಷ್ಯ ಸೃಷ್ಟಿಸುವವರೆಗೂ ಮೂಗಿರುವುದು ಉಸಿರಾಡುವುದಕ್ಕೆ ಮಾತ್ರ ಎಂದು ಮನುಷ್ಯ ಭ್ರಮಿಸಿದ್ದ.

ಮನುಷ್ಯನ ಅತ್ಯಂತ ಪ್ರಾಚೀನ ವಿದ್ಯೆ ನಿಂದೆ. ಬೇರೆ ಯಾವುದೇ ಉದ್ಯೋಗವಾದರೂ ಕಾಲಾಂತರದಲ್ಲಿ ಬೇಸರ ತರಬಹುದು. ಆದರೆ ನಿಂದೋದ್ಯೋಗದಲ್ಲಿ ಎಂದೂ ಬೇಸರವಿಲ್ಲ. ಅದು ಮನುಷ್ಯನಿಗೆ ಅತ್ಯಂತ ಉತ್ಸಾಹದಾಯಕವಾದ ಟಾನಿಕ್. 


The simplest way to improve your look is to wear a smile.. ನಿಮ್ಮ ಮುಖವನ್ನು ಆಕರ್ಷಕವಾಗಿ ಕಾಣಲು ಇರುವ ಅತ್ಯಂತ ಸುಲಭವಾದ ದಾರಿ ಎಂದರೆ ಮುಖದಲ್ಲಿ ನಗು ಧರಿಸುವುದು

ನನಗೆ ಅದು ಸಿಗಲಿಲ್ಲ, ಇದು ದಕ್ಕಲಿಲ್ಲ ಎಂದು ಗೊಣಗುತ್ತಿರುವುದರಿಂದಲೇ ನಮ್ಮ ಮನಸ್ಸಿನ ಸಂತೋಷ ಹಾಳಾಗುತ್ತದೆ. ಅದು ನಮ್ಮ ಮುಖದ ನಗೆಯನ್ನು ಮಾಯ ಮಾಡುವುದಷ್ಟೇ ಅಲ್ಲದೇ ಇತರರ ಮುಖದ ಮೇಲಣ ಮಂದಹಾಸವೂ ಮಾಸುವಂತೆ ಮಾಡುತ್ತದೆ





Comments

  1. ಚಿರ ಸ್ಮರಣೀಯ ಪ್ರಭುಶಂಕರರ ಮೇಲಿನ ಲೇಖನ ತುಂಬಾ ಸ್ವಾರಸ್ಯವಾಗಿದೆ. ಅವರ ಹಾಸ್ಯ ಪ್ರಜ್ಞೆ ಅನನ್ಯ. ಇವನ್ನು ಓದುಗರಿಗೆ ಪರಿಚಯ ಮಾಡಿಕೊಟ್ಟ ಬೇಲೂರು ರಾಮಮೂರ್ತಿ ಅವರಿಗೆ ಧನ್ಯವಾದಗಳು.

    ReplyDelete
  2. Thankyou very much for bringing back great memories of Appa.

    Asita Prabhushankar

    ReplyDelete
  3. So nostalgic to read the very jokes I had heard from his lips...a great friend to all generations to his friends

    ReplyDelete
  4. ಬೇಲೂರು ರಾಮಮೂರ್ತಿ ಯವರಿಗೆ ಧನ್ಯವಾದಗಳು. ಪ್ರಭುಶಂಕರರ ಬಗ್ಗೆ ಮತ್ತಷ್ಟು ವಿಷಯ ಪರಿಚಯ ಮಾಡಿಕೊಟ್ಟಿದ್ದೀರಿ.

    ReplyDelete
  5. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ReplyDelete

Post a Comment