ಹೊಸವರ್ಷ ಸಂಗೀತ ಸಂಜೆ ೨೦೧೯

ಹೊಸವರ್ಷ ಸಂಗೀತ ಸಂಜೆ ೨೦೧೯
 ವರದಿ - ಶ್ರೀ ನಾಗಶೈಲ ಕುಮಾರ್
ಮೈಗೆ ತಂಪನ್ನೀಯುವ ಮಳೆ ಹೊರಗೆ ಸುರಿಯುತ್ತಿದ್ದರೆ, ಸಿಡ್ನಿಯ ವಾಟಲ್ ಗ್ರೋವ್ ಶಾಲೆಯಲ್ಲಿ ಕಿವಿಗಿಂಪನ್ನೀವಂತೆ ಗಾನಸುಧೆ ಹರಿಯುತ್ತಿತ್ತು.
ಅಂದು ಅಲ್ಲಿ ಆಗಮಿಸಿದ್ದ ಶ್ರೀಮತಿ ರೋಹಿಣಿ ಮೋಹನ್ ರವರು ಸಾಂಕೇತಿಕವಾಗಿ ಜ್ಯೋತಿ ಬೆಳಗಿದ ನಂತರ ಕಾರ್ಯಕ್ರಮದ ಪ್ರಥಮ ಹಾಡುಗಾರನಾಗಿ ಬಂದ ಪುಟಾಣಿ ನಮಿತ್ ಉಮೇಶ್ " ಅಮ್ಮ ನಾನು ದೇವರಾಣೆ" ಎಂದು ತನ್ನ ಅಜ್ಜಿ ಶ್ರೀಮತಿ ಜಯಂತಿಯವರ ಜೊತೆ ಸೊಗಸಾಗಿ ಹಾಡಿದ. ಮನೆಯಲ್ಲಿ ಬೆಣ್ಣೆ ಕದ್ದಿದ್ದನೋ ಇಲ್ಲವೋ, ಕಾರ್ಯಕ್ರಮದಲ್ಲಿ ನೆರೆದಿದ್ದವರೆಲ್ಲರ ಮನಸ್ಸನ್ನಂತೂ ಗೆದ್ದಿದ್ದ. ಮತ್ತೊಬ್ಬ ಪುಟ್ಟ ಪೋರ ಶ್ರೀಶಾ ಧಮತ್ರೆ ಹಳೆಯ ವರ್ಷ ಮುಗಿದು ಹೊಸ ವರ್ಷದಾರಂಭಕ್ಕೆ ಹೊಂದುವಂತ " ಇಂದು ಮೂಡಿದ ಸೂರ್ಯ" ಭಾವಗೀತೆಯನ್ನು ಭಾವ ತುಂಬಿ ಹಾಡಿದ.
ಕುಮಾರಿ. ಸಿಮ್ರಾನ್ ಉದಯಗಿರಿ ಹಾಡಿದ "ಟಗರು ಬಂತು ಟಗರು" ಎಲ್ಲರೂ ಎಗರಿ ಕುಣಿವಷ್ಟು ಹುಮ್ಮಸ್ಸಿನಿಂದ ಕೂಡಿತ್ತು. ನಂತರ ಬಂದ ನಿರೀಕ್ಷಾ ಭಟ್, ಸಿಂಧು ನಾರಾಯಣ್, ಸಿರಿ ಧಮತ್ರೆ, ಮೂವರೂ ತಮ್ಮ ಪ್ರೌಢ ಗಾಯನದಿಂದ ಸಭಿಕರನ್ನು ಬೆರಗಾಗಿಸಿದರು. ನಿರೀಕ್ಷಾ ಸುಶ್ರಾವ್ಯವಾಗಿ " ಎಲ್ಲೋ ಜಿನುಗಿರುವ ನೀರು", ಸಿಂಧು ಅದ್ಭುತವಾಗಿ "ಭಾರತ ಭೂಶಿರ", ಮತ್ತು ಸಿರಿ ದೊಡ್ಡವರಿಗೇ ಕಷ್ಟವೆನಿಸುವ " ಶಿವಶಂಕರೀ ಶಿವಾನಂದ ಲಹರಿ" ಗೀತೆಯನ್ನು ಸರಾಗವಾಗಿ ಹಾಡಿ, ತಾವೆಷ್ಟು ಪ್ರತಿಭಾವಂತರು ಎಂಬುದನ್ನು ನಿರೂಪಿಸಿದರು.

ನಂತರ ಖ್ಯಾತ ಸುಗಮ ಸಂಗೀತ ಗಾಯಕಿ ಶ್ರೀಮತಿ ರೋಹಿಣಿ ಮೋಹನ್ ಅವರ ಕಿರು ಪರಿಚಯವಿತ್ತು. ಸುಗಮಸಂಗೀತದ ಹಿರಿಮೆಯನ್ನು ತಿಳಿಸುತ್ತಾ ಶ್ರೀಮತಿ ರೋಹಿಣಿ ಮೋಹನ್ ರವರು, ತಮ್ಮ ಗುರುಗಳಾದ ಹೆಚ್ ಆರ್ ಲೀಲಾವತಿ ಹಾಗೂ ಪದ್ಮಚರಣ್ ರವರನ್ನು ಸ್ಮರಿಸಿಕೊಂಡರು.
 ಅವರಿಗೆ ಸುಗಮ ಕನ್ನಡ ಕೂಟದ ಪರವಾಗಿ ಶ್ರೀಮತಿ ರಾಜಲಕ್ಷ್ಮೀ ನಾರಾಯಣ್ ಮತ್ತು ಶ್ರೀಮತಿ ಪೂರ್ಣಿಮಾ ಭಟ್ಟ ರವರು ಪ್ರಶಂಸಾ ಪತ್ರ ನೀಡಿ ಗೌರವಿಸಿದರು.
ಇದಾದ ನಂತರ, ಮತ್ತೊಮ್ಮೆ ಕಾರ್ಯಕ್ರಮ ಮುಂದುವರೆದಿತ್ತು. ಕಾಕನಕೋಟೆ ಚಿತ್ರದ "ನೇಸರ ನೋಡು" ಗೀತೆಯನ್ನು ಶ್ರುತಿ ರವರು ಹಾಡಿ, ಜನರಿಗೆಲ್ಲ ಮೋಡಿ ಮಾಡಿದರು. ಸೂರಜ್ ಅವರು ಏನಾಗಲಿ ಮುಂದೆ ಸಾಗು ನೀ ಎಂದು ಹಾಡುತ್ತಾ ಅಪಾರ ಚಪ್ಪಾಳೆ ಗಿಟ್ಟಿಸಿದರೆ, ಹೊರಗೆ ಸುರಿಯುತ್ತಿದ್ದ ಮಳೆಗೆ ಹೊಂದುವಂತೆ "ಮುಂಗಾರು ಮಳೆಯೇ" ಎಂದು ಒಳಗೆ ಕೂಡ ಇಂಪಿನ ಸಿಂಚನ ತಂದರು. ಅಂದಿನ ಏಕೈಕ ಯುಗಳ ಗೀತೆ ಶ್ರೀ ಶಂಕರ ಮಧ್ಯಸ್ಥ ಮತ್ತು ಶ್ರೀಮತಿ ಮೃದುಲ ಅವರಿಂದ  "ತಂ ನಂ ತಂ ನಂ" ಗೀತೆ ಎಲ್ಲರನ್ನೂ 40 ವರ್ಷಗಳಿಗೂ ಹಿಂದಕ್ಕೆ ಕರೆದೊಯ್ದಿತ್ತು. ನವಗ್ರಹ ಚಿತ್ರದ "ಕಣ್ ಕಣ್ಣ ಸಲಿಗೆ" ಗೀತೆಯಿಂದ ಶ್ರೀ ಸುನಿಲ್ ಎಲ್ಲರ ಮೆಚ್ಚುಗೆ ಗಳಿಸಿದರು. ಮತ್ತೊಮ್ಮೆ ವೇದಿಕೆಗೆ ಬಂದ ಶ್ರೀ ಶಂಕರ್ ಮಧ್ಯಸ್ತ "ಯಾರಿವಳು ಯಾರಿವಳು" ಗೀತೆಯನ್ನು ಸೊಗಸಾಗಿ ಹಾಡಿದರು. ನಂತರ ಬಂದವರು ಈ ವೇದಿಕೆಯ  ಜನಪ್ರಿಯ ಗಾಯಕ ಶ್ರೀ ಪ್ರದೀಪ್ "ಏನೆಂದು ನಾ ಹೇಳಲಿ" ಎನ್ನುತ್ತಾ ಜನರೇ ಬೊಂಬಾಟ್ ಎಂದು ಹೇಳುವಂತೆ ಹಾಡಿದರು. ಪದ್ಮಲತಾ ರಾವ್ "ಆಲೋಚನೆ ಆರಾಧನೆ" ಹಾಡುತ್ತಾ ಸಭಿಕರನ್ನು ತಮ್ಮೊಡನೆ ಸೇರಿಸಿಕೊಂಡರು. ವೇದಿಕೆಯಲ್ಲಿ ವಿದ್ಯುತ್ ಸಂಚಾರವಾಗುವಂತೆ ಹಾಡುವ ಗಾಯಕ ಶ್ರೀ ರಾಜೇಶ ಹೆಗಡೆ. ಇಂದು ಕೂಡ ಅವರು ಹಾಡಿದ "ರಾಧಿಕೆ ನಿನ್ನ ಸರಸ" ಗೀತೆ ಮೈ ರೋಮಾಂಚನಗೊಳ್ಳುವಂತೆ ಇತ್ತು. ಒಳ್ಳೆಯ ಊಟದ ಕಡೆಯ ತುತ್ತು ಯಾವಾಗಲೂ ಬಲುರುಚಿ ಹಾಗೆಯೇ ಈ ಕಾರ್ಯಕ್ರಮದ ಕಡೆಯ ಗೀತೆ ಈ ಕಾರ್ಯಕ್ರಮದ ವಿಶೇಷ ಭಕ್ಷ್ಯದಂತೆ ಇತ್ತು. ಯಾವ ಶೈಲಿಯ ಹಾಡೇ ಇರಲಿ, ಜನ ತಲೆದೂಗುವಂತೆ ಹಾಡುವ ಶ್ರೀನಿವಾಸನ್, ವಿಕ್ಟರಿ2 ಚಿತ್ರದ  "ನಾವ್ ಮನೆಗೆ ಹೋಗೋದಿಲ್ಲ" ಹಾಡುತ್ತಿದ್ದರೆ ಜನರು ನಗೆಬುಗ್ಗೆಯೊಂದಿಗೆ ಚಪ್ಪಾಳೆಯ ಮಳೆಯನ್ನೂ ಸುರಿಸಿದರು.





ಪ್ರಥಮ ಬಾರಿಗೆ ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯ ಹೊಣೆ ಹೊತ್ತ ಕುಮಾರಿ ಚೈತ್ರ, ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಎಲ್ಲರಿಂದ ಶಾಭಾಸ್ ಗಿರಿ ಗಿಟ್ಟಿಸಿದಳು. ಸುಗಮ ಕನ್ನಡ ಶಾಲೆಯ ಸಂಸ್ಥಾಪಕರಾದ ಶ್ರೀ ನಾರಾಯಣ ಕನಕಾಪುರ ರವರಿಂದ ವಂದನಾರ್ಪಣೆ, ನಂತರ ರುಚಿ ರುಚಿಯಾದ ಚಿತ್ರಾನ್ನ ಮೊಸರನ್ನಗಳ ಊಟವಿತ್ತು.
ಎಲ್ಲರೂ ಅಂದಿನ ಮಧುರ ಗೀತೆಗಳನ್ನು ಮೆಲುಕು ಹಾಕುತ್ತಾ ಹೋಗುವಂತಿತ್ತು ಆ ಸಂಜೆ.









Comments

  1. ವರದಿ ಚೆನ್ನಿದೆ ಧನ್ಯವಾದಗಳು ನಾಗಶೈಲ ಕುಮಾರ್ ಅವರಿಗೆ. ಎಲ್ಲ ಗಾಯಕರ ಹೆಸರು ಹಾಡಿದ ಹಾಡುಗಳ ಪೂರ್ತಿ ವಿವರ ಕೊಟ್ಟಿದ್ದೀರಿ,ಕಾರ್ಯಕ್ರಮ ಕೂಡಾ ಸವಿನೆನಪು.

    ReplyDelete
  2. Nice article. Good to see so many good songs has been sung. Keep it up

    ReplyDelete

Post a Comment