ಕುಡುಕನ ಡ್ರೈವಿಂಗ್ ಕೇಸು

ಕುಡುಕನ ಡ್ರೈವಿಂಗ್ ಕೇಸು
-Anaku Ramnath

ಇ: ಏಏಏ... ನಿಂತ್ಕೊಳಯ್ಯಾ...
ಕು: (ತೊದಲುತ್ತಾ) ನಿಂತ್ಕೊಳಕ್ಕಾದ್ರೆ ಇನ್ನೂ ಎರಡು ಪೆಗ್ ಏರಿಸ್ತಾ ಇದ್ದೆ ಸಾರ್... ಸ್ಸೋ ಸ್ಸಾರಿ...  ನನ್ನ ಹಿಂದೆ ನನ್ನ ಫ್ರೆಂಡ್ಸ್ ಬರ್ತಿದಾರೆ. ಅವರ ಹತ್ರ ಡ್ರಾಪ್ ಕೇಳಿ
ಇ: ಏಯ್! ನಾನು ಟ್ರಾಫಿಕ್ ಇನ್ಸ್‍ಪೆಕ್ಟರ್ ಅಂತ ಗೊತ್ತಾಗಲ್ವೇನಯ್ಯಾ? ನನ್ನ ಬಿಳಿ ಬಟ್ಟೆ ಕಾಣಲ್ವಾ....
ಕು: (ಕಣ್ಣು ಕಿಸಿದು ನೋಡಿ) ಊ. ಬಿಳಿ ಇದೆ. ಆದರೆ ಬೆಳ್ಳಗಿರೋದೆಲ್ಲ ಶರ್ಟಲ್ಲ, ಹೆಣದ ಮೇಲಿನ ಬಟ್ಟೇನೂ ಬಿಳೀನೇ ಅಂತ ಗಾದೆ ಇದೆ. ನೀವೂ....
ಇ: ಏಯ್. ಭೂತದ ಹಾಗೆ ಎದುರಿಗೆ ನಿಂತಿದೀನಿ, ನಾನು ಸತ್ತಿದೀನೋ ಬದುಕಿದೀನೋ ಅಂತ ಕೇಳ್ತಿದೀಯೇನೋ
ಕು: ಸ್ಸಾ... ಸ್ಸಾರಿ ಸರ್. ನೀವು ನಿಂತಿದೀರ.... ಹೆಣ ಮಲಗಿರತ್ತೆ.... ನೀವು ಮಲಗಿಲ್ಲ. ಸ್ಸೋ... ನೀವು ಹೆಣ ಅಲ್ಲ....
ಇ: ಬಾಯ್ಗೆ ಬಂದ್ಹಾಗೆ ಮಾತಾಡಿದ್ರೆ ಕೇಸ್ ಹಾಕ್ಬಿಡ್ತೀನಿ ನೋಡು...
ಕು: ಕ್ಕೇ... ಕ್ಕೇಸ್ಸ್... ಕ್ಕೇಸಾ ಸಾರ್..... ಹಾಗಾದ್ರೆ ಎರಡು ಕೇಸ್ ವಿಸ್ಕಿ, ಎರಡು ಕೇಸ್ ರಮ್..... (ಕಷ್ಟಪಟ್ಟು ಕಣ್ಣಗಲಿಸುತ್ತಾ) ಆರ್ಡರ್ ಬರ್ಕೊಂಡ್ರಾ ಸಾರ್...
ಇ: (ಕೈಯಲ್ಲಿರುವ ಬಾಟಲಿಂದ ನೀರನ್ನು ಕುಡುಕನ ಮುಖಕ್ಕೆ ಚಿಮುಕಿಸಿ) ಕಣ್ಬಿಡೋ ಲೇ
ಕು: (ಚೇತರಿಸಿಕೊಂಡು, ಮುಖ ಒರೆಸಿಕೊಂಡು) ಸ್ಸ್ಸಾರಿ ಸಾರ್.... ಏನೇನೋ ಮಾತಾಡ್ಬಿಟ್ಟೆ.
ಇ: ಸರಿ ಹೋಗಲಿ ಬಿಡು. ಈಗ ನೀನು ಎರಡು ಸಿಗ್ನಲ್ ಜಂಪ್ ಮಾಡಿದೆಯಲ್ಲಾ, ಯಾಕೆ?
ಕು: “ಕುಡಿತದ ದುಷ್ಪರಿಣಾಮಗಳು” ಅಂತ ಲೆಕ್ಚರ್ ಕೊಡ್ತಾರೆ ಸಾರ್... ಅದನ್ನ ಕೇಳಕ್ಕೆ ಹೊರಟಿದ್ದೆ...
ಇ: ಈ ಹೊತ್ತಿನಲ್ಲಿ ಲೆಕ್ಚರ್ರಾ? ಯಾರಯ್ಯ ಕೊಡೋದು?
ಕು: ಹಿಹ್ಹಿ! ನನ್ನ ಹೆಂಡತಿ ಸಾರ್... ಒನ್ ಅವರ್ ಲೆಕ್ಚರ್... ಎವೆರಿಡೇ... ನೀವೂ ಬರ್ತೀರಾ ಸಾರ್.... ಬೇಕಾದರೆ ಫ್ರಂಟ್ ಸೀಟ್ ನಿಮಗೇ ಬಿಟ್ಕೊಡ್ತೀನಿ...
ಇ: ಶಟಪ್. ಸಿಗ್ನಲ್ ಯಾಕೆ ಜಂಪ್ ಮಾಡಿದೆ ಹೇಳು...
ಕು: ಒಳ್ಳೆ ಜೋಕ್ ಸಾರ್ ನಿಮ್ಮದು... ನಿಲ್ಲಕ್ಕಾಗಲ್ಲ, ನಡೆಯಕ್ಕಾಗಲ್ಲ... ಅಂತಹವನು ಜಂಪ್ ಮಾಡಕ್ಕಾಗತ್ತಾ....
ಇ: (ಪೇದೆಯನ್ನು ಕರೆದು) ಏಯ್ 203, ಇವನಿಗೆ ಆ ಬ್ರೀತಲೈಜರ್ ಇಡೋ...
(ಪೇದೆ ಕುಡಿದಿದ್ದಾನೋ ಇಲ್ಲವೋ ಎನ್ನುವುದನ್ನು ಕಂಡುಹಿಡಿಯುವ ಯಂತ್ರವನ್ನು ಕುಡುಕನ ಮುಖಕ್ಕೆ ಒಡ್ಡುವನು. ಅದು ಕುಡಿದಿಲ್ಲ ಎಂದು ತೋರಿಸುವುದು)
ಇ: ಏಯ್... ನೀನು ಕುಡಿದಿದ್ದೀನಿ ಅಂತೀಯ, ಮೆಷಿನ್ ಕುಡಿದಿಲ್ಲ ಅನ್ನತ್ತೆ. ಯಾವುದು ನಿಜ?
ಕು: ಸುಮ್ಮನೆ, ಜಸ್ಟ್ ಫಾರ್ ಫನ್, ನಿಮ್ಮ ಮುಖಕ್ಕೇ ಅದನ್ನ ಹಿಡ್ಕೊಂಡು ನೋಡಿ ಸಾರ್....
(ಇನ್ಸ್‍ಪೆಕ್ಟರ್ ಹಿಡಿದುಕೊಳ್ಳುವನು. ಅದು ಕುಡಿದಿದ್ದಾನೆ ಎಂದು ತೋರಿಸುವುದು)
ಇ: ಇದೇನಾಶ್ಚರ್ಯ!
ಕು: ಆ ಮೆಷಿನ್ ಫುಲ್ ಟೈಟ್ ಆಗಿದೆ ಸಾರ್. ನಮ್ಮಂತಾ ಕುಡುಕರಿಗೇ ಒಂದು ಲೆವೆಲ್ ಆದ್ಮೇಲೆ ಔಟ್ ಆಗತ್ತೆ... ಇನ್ನು ಆ ಮೆಷಿನ್‍ನ ಅಷ್ಟೊಂದು ಬಾಯಿಗಳ ಹತ್ರ ಹಿಡಿದರೆ ಅದೂ ಟೈಟ್ ಆಗಲ್ವಾ ಸಾರ್....
ಇ: ಅದ್ಸರಿ... ಆದರೆ ನಾನು ಕುಡಿದಿದ್ದೀನಿ ಅಂತ ಯಾಕೆ ತೋರಿಸಿತು?
ಕು: ನೀವೂ ಸರಿ. ಫುಲ್ ಟೈಟ್ ಆದ ಮನುಷ್ಯರಿಗೇ ಜ್ಞಾನ ಇರಲ್ಲ, ಇನ್ನು ಮೆಷಿನ್‍ಗೆ ಇರತ್ತಾ? ಅದೂ ಔಟ್ ಸಾರ್... ನನ್ನ ಹೆಂಡತಿ ಮಾಡಿದ ಹಾಗೇ ನೀವೂ ಮಾಡಿ
ಇ: ಏನು ಮಾಡ್ತಾರೆ ಅವರು?
ಕು: ನಾನು ಎಣ್ಣೆ ಹಾಕಿ ಹೋಗ್ತೀನಿ, ಅವಳು ನೀರು ಹಾಕ್ತಾಳೆ.... ದಿನವೂ ನಮ್ಮ ಮನೇಲಿ ಎಣ್ಣೆ-ನೀರು. ನಿಮ್ಮ ಮೆಷಿನ್‍ಗೂ ಸ್ನಾನ ಮಾಡಿಸಿ ಸಾರ್.... ಹೆಡ್ ಬಾತ್... ಸರಿಹೋಗತ್ತೆ...
ಇ: ತಲೆಹರಟೆ... ಎಲ್ಲೋ ಇದು ಕರಪ್ಟ್ ಆಗಿರಬೇಕು ಅಷ್ಟೆ
ಕು: ಇರಬಹುದು ಸಾರ್.... ಸರ್ಕಾರದ ವಸ್ತು ಅಂದಮೇಲೆ ಕರಪ್ಟ್ ಆಗೋದು ಸಹಜ...
ಇ: ಅವೆಲ್ಲ ಇರಲಿ ಬಿಡು. ಈಗ ನೀನು ಸಿಗ್ನಲ್ ಜಂಪ್ ಮಾಡಿದ ಕಾರಣ ಹೇಳು
ಕು: ನೋಡಿ ಸಾರ್, ನಾನು ಸಿಗ್ನಲ್‍ಗೆ ಬಂದನಾ, ಅಲ್ಲಿ ಎಲ್ಲೋ ಸಿಗ್ನಲ್ ಬಂತು, ಆಸೆ ಆಯ್ತು
ಇ: ಸಿಗ್ನಲ್ ನೋಡಿದರೆ ಏನು ಆಸೆ ಆಗತ್ತೋ?
ಕು: ಸೂಪರ್ ಹಳದಿ ಬಣ್ಣ ಸಾರ್.... “ಹಳದಿಯೆ ನಿನ್ನ ನೋಡಲು; ಬಾಟಲಿಯ ವಿಸ್ಕಿಯದು ಮನಸಿಗೆ ಹೊಳೆಹೊಳೆವುದು; ಬಾರಿಗೆ ಓಡಲು ಹೊರಡುವೆನು..... ಹಳದಿಯೆ ನಿನ್ನ ನೋಡಲೂಊಊಊ....”
ಇ: ಶಟಪ್. ಹಳದಿ ಆದಮೇಲೆ ಕೆಂಪು ಬಂತಲ್ಲಾ, ಆಗ ನಿಲ್ಬೇಕಾಗಿತ್ತು ತಾನೆ...
ಕು: ನಿಮಗೇನು ಗೊತ್ತು ಕುಡುಕರ ಕಷ್ಟ... ಕೆಂಪು ನೋಡಿದಾಗಲೆಲ್ಲ ನನಗೆ ರೆಡ್ ವೈನ್ ನೆನಪಾಗತ್ತೆ....
ಇ: (ಸ್ವಲ್ಪ ಯೋಚಿಸಿ) ನೋಡು, ಮೆಷಿನ್ ನೀನು ಕುಡಿದಿಲ್ಲ ಅಂತ ಹೇಳಿದ್ರಿಂದ ನಿನ್ನ ಮೇಲೆ ಕೇಸ್ ಇಲ್ಲ. ಆದರೆ ನಿನ್ನ ಒಳ್ಳೇದಕ್ಕೋಸ್ಕರ ಕೆಲವು ಪ್ರಶ್ನೆಗಳನ್ನ ಕೇಳ್ತೀನಿ. ಉತ್ತರ ಕೊಡು.
ಕು: ಬೇಡ ಸಾರ್... ನೀವು ಕೇಳೋ ಪ್ರಶ್ನೆಗಳಿಗಿಂತ ಜಾಸ್ತಿ ಪ್ರಶ್ನೆಗಳನ್ನ ಕೇಳಕ್ಕೆ ನನ್ನ ಹೆಂಡತಿ ಕಾದಿರ್ತಾಳೆ... ಬಿಟ್ಬಿಡಿ ಸಾರ್...
ಇ: 203, ಇವನ ಮೇಲೆ ಸಿಗ್ನಲ್ ಜಂಪ್ ಕೇಸು, ರ್ಯಾಷ್ ಡ್ರೈವಿಂಗ್ ಕೇಸು ಜಡಿಯೋ...
ಕು: ಒಂದು ರಿಕ್ವೆಸ್ಟು ಸಾರ್...
ಇ: ಏನು?
ಕು: ಆರೋಪ ಹೊರಿಸು ಅನ್ನಿ ಸಾರ್... ಕೇಸು ಅನ್ಬೇಡಿ ಸಾರ್... ಕೇಸು ಅಂದಾಗೆಲ್ಲ ಕ್ರೇಟುಗಳೇ ಕಣ್ಮುಂದೆ ಬರತ್ತೆ ಸಾರ್...
ಇ: ಹುಟ್ಟಾ ತರಳೆ ಕಣಯ್ಯ ನೀನು. ಸರಿ. ಈಗ ಹೇಳು, ರಸ್ತೆ ಎಂದರೇನು?
ಕು: (ಕಣ್ಣು ಪಿಳುಚುತ್ತಾ) ಸ್ಸಾರ್....ರೋಡ್ ಅಂದ್ರೆ... ಎರಡು ಪಾಟ್‍ಹೋಲ್ಸ್.... ಗುಂಡಿಗಳ ಮಧ್ಯೆ ಇರೋ ಜಾಗಕ್ಕೆ ರೋಡ್ ಅಂತ ಕರೀತಾರೆ ಸಾರ್...
ಇ: ನಾವು ರಸ್ತೆಯ ಯಾವ ಭಾಗದಲ್ಲಿ ಓಡಾಡಬೇಕು?
ಕು: ನೀವು ಒಂದು ಎರಡು ಹೇಳ್ಕೊಂಡ್ಹೋಗಿ ಸಾರ್....
ಇ: ಯಾಕೆ?
ಕು: ನೀವು ಹೇಳಿ ಸಾರ್, ಆಮೇಲೆ ನಾನು ಕಾರಣ ಹೇಳ್ತೀನಿ
ಇ: ಒಂದು
ಕು: ಕೆಇಬಿ
ಇ: ಎರಡು
ಕು: ಬಿಎಸ್‍ಎನ್‍ಎಲ್
ಇ: ಮೂರು
ಕು: ಆಪ್ಟಿಕ್ ಫೈಬರ್
ಇ: ನಾಲ್ಕು
ಕು: ಜಲಮಂಡಳಿ
ಇ: ಐದು
ಕು: ಅಣ್ಣಮ್ಮ ಗಣೇಶಗಳು.... ಇವರೆಲ್ಲರೂ ಅಗಿದಿರೋ ಹೊಂಡಗಳು ಬಿಟ್ಟು, ಭಿಕ್ಷುಕರಿಗೆ ಜಾಗ ಕೊಟ್ಟು, ಉಳಿದಿರೋ ಜಾಗದಲ್ಲಿ ನಾವು ಓಡಾಡಬೇಕು. ಸ್ಸರೀನಾ ಸ್ಸಾರ್?
ಇ: ತರಲೆ. ರೋಡ್ ಡಿವೈಡರ್ ಇರೋದು ಯಾಕೆ?
ಕು: ಸುಸ್ತಾಗಿರೋ ಹಸುಗಳು ಮಲಗಕ್ಕೆ ಸಾರ್....
ಇ: ಥತ್. ಒಂದಕ್ಕಾದರೂ ಸರಿಯಾಗಿ ಉತ್ತರ ಹೇಳಯ್ಯಾ...
203: ಅವನು ಹೇಳ್ತಿರೋದು ಸರಿಯಾಗೇ ಇದೆಯಲ್ಲ ಸಾರ್...
ಇ: ಯೂ ಶಟಪ್. ಫುಟ್‍ಪಾತ್ ಇರುವುದು ಏಕೆ?
ಕು: ಟ್ರಾಫಿಕ್ ಜಾಮ್ ಆದಾಗ, ಮುಂದುಗಡೆ ಕೆಟ್ಟಿರೋ ಬಸ್ಸು, ಲಾರಿ ನಿಂತಿರುವಾಗ ಟೂ ವೀಲರ್‍ನವರಿಗೆ ಅರ್ಜೆಂಟಾಗಿ ಹೋಗಬೇಕಾಗಿರುವಾಗ ಯೂಸ್ ಮಾಡಕ್ಕೇಂತ ಫುಟ್‍ಪಾತ್ ಇದೆ ಸಾರ್
ಇ: ಮೋರಿಗಳು ಇರೋದು ಯಾಕೆ?
ಕು: ಕುಡುಕರ ಹಿತರಕ್ಷಣೆಗೆ ಸಾರ್...
ಇ: ಕುಡುಕರ ಹಿತರಕ್ಷಣೆಗಾ? ಅದು ಹೇಗೋ?
ಕು: ಕುಡಿದವರು ಬೀದೀಲಿ ಬಿದ್ರೆ ಯಾರಾದರೂ ಹತ್ತಿಸ್ಕೊಂಡು ಹೋಗ್ಬಿಡ್ತಾರೆ ಸಾರ್... ಆದರೆ ಮೋರಿಲಾದರೆ ಸೇಫ್... ಮನೆಯವರು ಹುಡುಕಿಕೊಂಡು ಬರೋವರ್ಗೂ ಅಲ್ಲೇ ಇರಬಹುದು ಸಾರ್... ಎಂಗೈತೆ ಐಡಿಯಾ...
ಇ: ಹೋಪ್‍ಲೆಸ್ ಫೆಲೋ... ಸರಿ, 30 ಕಿಲೋಮೀಟರ್ ಸ್ಪೀಡಲ್ಲಿ ಯಾವಾಗ ಹೋಗಬೇಕು?
ಕು: ಲೇಡೀಸ್ ಕಾಲೇಜ್ ಮುಂದೆ ಸಾರ್.... ಸ್ಪೀಡ್ ಜಾಸ್ತಿ ಆದರೆ ಲೈನ್ ಹೊಡೆಯಕ್ಕೆ ಆಗಲ್ವಲ್ಲ...
ಇ: ಸಿಕ್ಸ್‍ಟಿ ಕಿಲೋಮೀಟರ್ ಸ್ಪೀಡಲ್ಲಿ?
ಕು: ಇನ್ನೇನು ಎಲ್ಲೋ ಲೈಟಿಂದ ರೆಡ್‍ಲೈಟ್ ಬಿದ್ಬಿಡತ್ತೆ ಅಂತಾದಾಗ...
ಇ: 90 ಕಿಲೋಮೀಟರ್ ಸ್ಪೀಡಲ್ಲಿ ಯಾವಾಗ ಹೋಗಬೇಕು?
ಕು: 90 ಹಾಕಿದಾಗ ಸಾರ್.... ತಣ್ಣ ಗಾಳಿ ಬೀಸಿದರೆ ಮನೆಗೆ ಹೋಗೋವಷ್ಟು ಹೊತ್ತಿಗೆ ಸ್ವಲ್ಪ ಕಿಕ್ ಕಡಿಮೆ ಆಗಿರತ್ತೆ
ಇ: 120 ಕಿಲೋಮೀಟರ್ ಸ್ಪೀಡು?
ಕು: ಬಾಯಿಗೆ ಅಕ್ಕಿಕಾಳು ಹಾಕ್ಕೊಳೋ ಬಯಕೆ ಬಂದಾಗ
ಇ: ಹಿಂದಗಡೆಯಿಂದ ಆಂಬುಲೆನ್ಸ್ ಸೌಂಡ್ ಕೇಳಿಸತ್ತೆ, ಆಗ ಏನ್ಮಾಡ್ತೀಯ?
ಕು: ಅದು ಹೋಗಕ್ಕೆ ದಾರಿ ಮಾಡಿಕೊಡ್ತೀನಿ. ಆಮೇಲೇ...
ಇ: ಆಮೇಲೆ?
ಕು: ಅದರ ಹಿಂದೇನೇ ಝಝಝಯ್‍ಯ್‍ಯ್ ಅಂತ ಸ್ಪೀಡಾಗಿ ಫಾಲೋ ಮಾಡ್ತೀನಿ...
ಇ: ನೀನು ಕುಡಿದು ಮನೆಗೆ ಹೋಗ್ತೀಯಲ್ಲ, ಡು ನಾಟ್ ಡ್ರಿಂಕ್ ಅಂಡ್ ಡ್ರೈವ್ ಅಂತ ಕೇಳಿಲ್ವೇನು?
ಕು: ಕೇಳಿದೀನಿ ಸಾರ್.... ಕುಡಿದು ವಾಹನ ಓಡಿಸಬೇಡಿ ಅನ್ನೋದನ್ನ ಅಕ್ಷರಶಃ ಪಾಲಿಸಯೂ ಇದ್ದೀನಿ ಸಾರ್
ಇ: ಗುಡ್... ಹೇಗೆ?
ಕು: ಕುಡಿದು ವಾಹನ ಓಡಿಸೋದರ ಬದಲು ವಾಹನ ಓಡಿಸ್ತಾನೇ ಕುಡೀತಾ ಇರ್ತೀನಿ ಸಾರ್....
ಇ: (ತನ್ನ ಕಂಪ್ಯೂಟರ್ ತೆಗೆದು) ನಿನ್ನ ಮೇಲೆ ಎರಡು ಸಿಗ್ನಲ್ ಜಂಪ್ ಕೇಸ್ ಪೆಂಡಿಂಗ್ ಇದೆ
ಕು: ಅದಕ್ಕೆ ಕಾರಣಗಳಿದ್ದವು ಸಾರ್
ಇ: ಏನು?
ಕು: ಮೊದಲನೆಯ ಸಲ ಭಯೋತ್ಪಾದಕರು ಅಟ್ಟಿಸಿಕೊಂಡು ಬಂದರು ಸಾರ್
ಇ: ಭಯೋತ್ಪಾದಕರು? ಯಾರವರು?
ಕು: ವಸೂಲಿ ಮಾಡೇ ಮಾಡ್ತೀವಂತ ಬಂದ ನನಗೆ ಸಾಲ ಕೊಟ್ಟವರು.
ಇ: ಎರಡನೆಯ ಸಾರಿ?
ಕು: ಉಗ್ರರು
ಇ: ಅಂದರೆ?
ಕು: ಹ್ಹಿಹ್ಹಿ. ಬಾರ್ ಮಾಲಿಕರು ಸಾರ್. ಅವತ್ತು ಕುಡಿದ ಬಿಲ್ ಬಾಕಿ ಇತ್ತು.....
ಇ: ಅಂದರೆ ಕುಡಿದ ಜ್ಞಾನದಲ್ಲಿ ಸಿಗ್ನಲ್ ಜಂಪ್ ಮಾಡಿದೆ ಅನ್ನು....
ಕು: ಬಿಡಿ ಸಾರ್... ಕುಡಿದದ್ದು ಅವತ್ತೇ ಇಳಿದುಹೋಗಿರುವಾಗ ಕೇಸ್ ಯಾಕೆ ಹತ್ತಿಸ್ತೀರಿ....
ಇ: ಇಷ್ಟೆಲ್ಲ ತರಲೆ ಮಾಡಿದರೂ ಹೆಲ್ಮೆಟ್ ಹಾಕ್ಕೊಳೋದು ಮಾತ್ರ ಮರೆತಿಲ್ಲ. ಹಿಂದಿನ ಸೀಟ್‍ಗೂ ಹೆಲ್ಮೆಟ್ ಇಟ್ಕೊಂಡಿದೀಯ. ಭೇಷ್. ಹೆಲ್ಮೆಟ್ ಯಾಕೆ ಹಾಕ್ಕೋಬೇಕು ಹೇಳು.
ಕು: ನಮ್ಮ ಸೇಫ್ಟೆಗೋಸ್ಕರ ಸಾರ್
ಇ: ಗುಡ್
ಕು: ನಾನು ನನ್ನ ಗರ್ಲ್‍ಫ್ರೆಂಡ್ ಇಬ್ಬರೂ ಹೆಲ್ಮೆಟ್ ಹಾಕ್ಕೊಂಡು ಹೋಗೋವಾಗ ಹೆಂಡತಿ ಅಡ್ಡ ಬಂದರೆ ಕಷ್ಟ ಅಂತ ಗೊತ್ತಾದಾಗಲಿಂದ ಹೆಲ್ಮೆಟ್ ಇಟ್ಕೊಂಡೇ ಇರ್ತೀನಿ ಸಾರ್....
ಇ: ಓಹೋ... ನಿನಗೆ ಮದುವೆಯಾಗಿದೂ ಒಂದು ಗರ್ಲ್ ಫ್ರೆಂಡ್ ಬೇರೇನಾ... ಯಾರಯ್ಯ ಅವಳು?
ಕು: ಬೇಡ ಬಿಡಿ ಸಾರ್...
ಇ: ಇಷ್ಟೆಲ್ಲ ಹೇಳಿದೀಯಂತೆ, ಅದನ್ನೂ ಹೇಳ್ಬಿಡಯ್ಯಾ
ಕು: ಇರಲಿ ಬಿಡಿ ಸಾರ್...
ಇ: ಹೇಳಂದ್ರೆ ಹೇಳ್ಬೇಕ್
ಕು: ನಿಮ್ಮ ಮಗಳು ಸಾರ್
ಇ: ಆ! 203, ಹಿಡಿಯೋ ಅವನನ್ನ... ಬರ್ಕೋ ಸೆಕ್ಷನ್.......
ಕು: (ಓಡುತ್ತಾ) ವೆಹಿಕಲ್ ಗುರುತಿಸಲೇ ಇಲ್ಲವಲ್ಲ ಸಾರ್... ನಿಮ್ಮ ಮಗಳದೇ... ತಲುಪಿಸಿಬಿಡಿ ಸಾರ್.... ಬೈ (ಓಡಿ ಮರೆಯಾಗುವನು)
ಕ್ಯಾಮರಾ ಫೇಡ್ ಔಟ್

Comments

  1. can`t stop laughing what an imagination sir

    ReplyDelete
  2. ಅದರ ಹಿಂದೇನೇ ಝಝಝಯ್‍ಯ್‍ಯ್ ಅಂತ ಸ್ಪೀಡಾಗಿ ಫಾಲೋ ಮಾಡ್ತೀನಿ - this is cent percent true sir. ಫುಟ್‍ಪಾತ್ ಇರುವುದು ಏಕೆ? ಇದಕ್ಕೆ ಕೊಟ್ಟಿರುವ ಉತ್ತರ ಸೂಪರ್ ಸಾರ್ .....

    ReplyDelete

Post a Comment