ಶ್ವಾನ ಕಂಡ ದೀಪಾವಳಿ

ಶ್ವಾನ ಕಂಡ ದೀಪಾವಳಿ
-Anaku Ramnath


ನೀರು ತುಂಬುವ ಹಬ್ಬದಂದು ಮೂರು ಬೀದಿ ಸೇರುವ ಜಾಗದಲ್ಲಿ ಶ್ವಾನವೊಂದು ಮಲಗಿತ್ತು.
"ಇದೇನು ಮಿಸ್ಟರ್ ಶ್ವಾನ್, ಹಗಲಲ್ಲೇ ಮಲಗಲು ನೀವೇನು ಮಂತ್ರಿಯೋ, ಪುಢಾರಿಯೋ?" ಎಂದೆ.
"ಶಟಪ್. ಆ ಕೀಳು ಪದವಿಗಳಿಗೆ ಹೋಲಿಸಿದರೆ ನಿಮ್ಮ ಮೀನಖಂಡವನ್ನು ಛಿದ್ರಗೊಳಿಸುತ್ತೇನೆ, ಥೌಸೆಂಡ್ ರುಪೀಸ್ ವರ್ಥಿನ ನಿನ್ನ ಶೊಲ್ಲಾಪುರೀ ಚಪ್ಪಲಿಯನ್ನು ಹುಟ್ಲಿಲ್ಲ ಅನ್ನಿಸಿಬಿಡುತ್ತೇನೆ, 'ಹಷ್ ಪಪ್ಪಿ' ಷೂಗಳನ್ನು ಟ್ರಾಷ್ ತಿಪ್ಪೆ ಷೂಗಳಾಗಿ ಕನ್ವರ್ಟಿಸಿಬಿಡುತ್ತೇನೆ" ಎನ್ನುತ್ತಾ ತನ್ನ ನಲವತ್ತೆರಡೂ ಹಲ್ಲುಗಳನ್ನು ತೋರಿಸಿತು.


"ಹಾಗೆಲ್ಲ ಮಾಡಿದರೆ ನಿನ್ನನ್ನು ಒರಿಜಿನಲ್ ಮಂತ್ರಿಯ ಒರಿಜಿನಲ್ ಮಗ ಎಂದಾರು" ಎಂದೆ.
ಶ್ವಾನಕ್ಕೆ ಕೂಡಲೆ ತನ್ನ ತಪ್ಪಿನ ಅರಿವಾಯಿತು. ದುಃಖದಿಂದ ಅದರ ಕೆಳಗಲ್ಲಗಳು ಅದುರಿದವು. ಮುಖದಲ್ಲಿ ಕಳೆಗುಂದಿತು. ತಲೆ ಲಜ್ಜೆಯಿಂದ ಬಾಗಿತು. ಗದ್ಗದ ಸ್ವರದಿಂದ ಶ್ವಾನವು,
"ದಯವಿಟ್ಟು ಕ್ಷಮಿಸು. ನನ್ನದು ತಪ್ಪಾಯಿತು. ಮತ್ತೊಮ್ಮೆ ಈ ವಿಧದಲ್ಲಿ ನಡೆದುಕೊಳ್ಳುವುದಿಲ್ಲ. ಆದರೆ.... ಮಂತ್ರಿ ಎಂದು ಮಾತ್ರ ಹೇಳಬೇಡ. ನನ್ನ ಆತ್ಮಾಭಿಮಾನಕ್ಕೆ ಧಕ್ಕೆ ಉಂಟಾಗುತ್ತದೆ" ಎಂದು ಸಣ್ಣ ದನಿಯಲ್ಲಿ ನುಡಿಯಿತು. ಶ್ವಾನದ ಈ ವಾಕ್ಯದಲ್ಲಿನ ಕನ್ನಡಬದ್ಧತೆಯನ್ನು ಕಂಡು ನಾನು ಅಚ್ಚರಿಗೊಂಡೆ.
"ಮೊದಲನೆಯ ವಾಕ್ಯದಲ್ಲಿ ಇದ್ದ ಇಂಗ್ಲಿಷ್ ಈ ವಾಕ್ಯದಲ್ಲಿ ಬರದಿರಲು ಕಾರಣವೇನು?" ಎಂದೆ.
"ನವೆಂಬರ್ ಎಂದು ನೆನಪಿಗೆ ಬಂತು. ಈ ಮಾಸದಲ್ಲಿ ಪ್ರತಿ ಕನ್ನಡ ಪ್ರಾಣಿಗೂ ಕನ್ನಡದಲ್ಲಿ ಮಾತನಾಡುವ ಚಟ."
"ಸರಿ, ನಿನ್ನ ನಿದ್ರೆಗೇನು ಕಾರಣ?"
"ಇನ್ನು ಮೂರು ದಿನ ಸಿಕ್ಕಾಪಟ್ಟೆ ಓಡಬೇಕಲ್ಲ, ಆದ್ದರಿಂದ ಮೊದಲೇ ಕೊಂಚ ವಿಶ್ರಾಮಿಸೋಣವೆಂದು"
"ಅದೇನು ಮೂರು ದಿನಗಳ ಓಟ? ಫ್ರೀಡಂ ರನ್, ಮ್ಯಾರಥಾನ್, ಪರಿಸರಕ್ಕಾಗಿ ಓಟ... ಯಾವುದಕ್ಕೆ ಸೇರಿದ್ದೀಯೆ?"
"ಹ್ಹ! ಅವಕ್ಕೆಲ್ಲ ಈಗ ಸೇರಿದರೆ ಪ್ರಯೋಜನವಿಲ್ಲ."
"ಏಕೆ?"
"ಅದೇನಿದ್ದರೂ ಮದುವೆಯಾಗಿ, ಮದುವೆಯಿಂದ ಹೊರಬರಲಾಗದೆ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವವರಿಗೆ ಬೇಕಾದುದಷ್ಟೆ. ನಮ್ಮದು ಅವರ್ಲಿ ಬೇಸಿಸ್ ಮೇಲೆ ಲಿವಿಂಗ್ ಟುಗೆದರ್. ಫ್ರೀ ಲಿವಿಂಗ್ನವರಿಗೆ ಫ್ರೀಡಮ್ಮು ಈಸ್ ಎ ಪರ್ಮನೆಂಟ್ ಥಿಂಗು.."
"ಮ್ಯಾರಥಾನ್?"
"ಶ್ವಾನಗಳಿಗೆ ಇದು ಸಾಧ್ಯವೇ ಇಲ್ಲ. 'ಹಮಾರಾ ಗಲೀಮೇ ಹಮಾರಾ ಕಾರ್ಪೊರೇಟರ್ ಶೇರ್' ಅಂದಹಾಗೇ ಒಂದೊಂದು ಗಲ್ಲಿಯಲ್ಲೂ ಒಂದೊಂದು ಸೊಣಗ ತನ್ನದೇ ಎಂಪೈರ್ ಸ್ಥಾಪಿಸಿಕೊಂಡಿರುತ್ತದೆ. ನಾವು ಆ ಏರಿಯಾಗಳಲ್ಲಿ ವಾಕ್ ಮಾಡಿದರೆ ಟ್ರೆಸ್ಪಾಸಿಂಗ್ ಕೇಸ್ ಹಾಕುತ್ತವೆ."
"ಪರಿಸರಕ್ಕಾಗಿ ಓಟ?"
"ಪ್ರಯೋಜನವೇನು? ನೀವು ನರರು ಬಿಸಾಡಿದುದನ್ನೆಲ್ಲ ಅಗುಳೂ ಬಿಡದೆ ತಿಂದು ಪ್ರತಿ ತಿಪ್ಪೆಯನ್ನೂ ಕ್ಲೀನ್ ಮಾಡ್ತಿದ್ವಿ ಆ ಕಾಲದಲ್ಲಿ. ಈಗ ನಾಯಿಗಳೂ ತಿನ್ನಕ್ಕೆ ಆಗದಷ್ಟು ಚೂಪಾದ 'ಡಯಟ್ ರೋಟಿಗಳು', 'ಸಪ್ಪೆ ಸೊಪ್ಪುಗಳ ಪಲ್ಯ', ಹಕ್ಕಿಗಳೂ ತಿನ್ನದ 'ಸಿರಿಧಾನ್ಯ ಬಾತ್‍'ಗಳೂ... ಛೆ! ಸ್ವಾಭಿಮಾನವಿರುವ ಯಾವ ನಾಯಿಯೂ ತಿನ್ನದುದನ್ನು ನೀವು ತಿನ್ನುತ್ತೀರ, ಎಸೆಯುತ್ತೀರ... ಕ್ಷಮಿಸು ಮೈಬಾಯ್, ನೀವು ಕೊಳಚೆ ಹಾಕುವ ಸ್ಪೀಡಿಗೆ ನೂರು ಮೋದಿಗಳು ಬಂದರೂ ಕ್ಲೀನ್ ಮಾಡಲು ಸಾಧ್ಯವಿಲ್ಲ. ಇನ್ನು ಯಃಕಶ್ಚಿತ್ ನಾಯಿಗಳು ನಾವೇನು ಮಾಡಲು ಸಾಧ್ಯ" ಎಂದು ಕೈ... ಕ್ಷಮಿಸಿ... ಮುಂಗಾಲು ಚೆಲ್ಲಿತು... ಐ ಮೀನ್... ಒದರಿತು ಶ್ವಾನ.
"ಹಾಗಾದರೆ ಮೂರು ದಿನಗಳ ಓಟ ಯಾವುದು?"
"ಬಂತಲ್ಲ ದೀಪಾವಳಿ. ನರರಿಗೆ ಅದು ದೀಪಗಳ ಆವಳಿ. ನಾಯಿಗಳಿಗೆ ಅದು ಡೀಪ್ ಹಾವಳಿ... ಅದೇನ್ ಪ್ರಾಣಿಗಳೂಂತ ಹುಟ್ಬಿಟ್ವೋ ಈ ಹೋಮೋ ಸೇಪಿಯನ್ಸ್ ಜಗತ್ತಿನಲ್ಲಿ" ಮನುಕುಲವನ್ನೇ ಧಿಕ್ಕರಿಸಿತು ಶ್ವಾನ.
"ಏಕೆ? ನಮ್ಮಲ್ಲೇನಿದೆ ತಪ್ಪು?"
"ಹಾಳು ಸ್ನಾನವೆಂಬ ಪದ್ಧತಿ ಕಂಡುಹಿಡಿದಿರಲ್ಲ. ನೀವು ಮಾಡುವುದಲ್ಲದೆ ಸಾಕಿದ ನಾಯಿಗೆ ಬೇರೆ ಮಾಡಿಸುವ ಕೆಟ್ಟ ಚಾಳಿ. ಸದ್ಯ... ದೀಪಾವಳಿ ಬಂತೂಂತ ನಮಗೂ ಎಣ್ಣೆ ಇಟ್ಟು ಸ್ನಾನ ಮಾಡಿಸಲ್ಲವಲ್ಲ.... ಸ್ನಾನದ ವಿಷಯದಲ್ಲಿ ಬರ್ತಾ ಬರ್ತಾ ನಿಮ್ಮ ಸಿಸ್ಟಮ್ನಲ್ಲಿ ಬದಲಾವಣೆ ಮೂಡಿದೆ."
"ಏನದು?"
"ಮೊದಲು ಜನ ಎಣ್ಣೆಯನ್ನ ದೇಹಕ್ಕೆ ಹಚ್ಚಿಕೊಂಡು, ಆಮೇಲೆ ನೀರು ಹೊಯ್ದುಕೊಳ್ಳುತ್ತಿದ್ದರು."
"ಈಗ?"
"ಎಣ್ಣೆ ಹಾಕಿಕೊಂಡು ಬಂದವರ ಮೇಲೆ ಕೊಡಗಟ್ಟಲೆ ನೀರು ಸುರಿಯುತ್ತಾರೆ. ಅಂದಿನದು ಉಲ್ಲಾಸದಿಂದ ಮಾಡಿದ ಅಭ್ಯಂಜನ ಸ್ನಾನ. ಇಂದಿನದು ಫುಲ್ ಕೋಪದಿಂದ ಮಾಡಿಸುವ ಅಭ್ಯಂತರ ಸ್ನಾನ."

"ಹೇಗೋ ಒಂದು... ಹಬ್ಬಕ್ಕೆ ನೀರು ಹೊಯ್ದುಕೊಂಡರೆ ಸರಿ" ಎಂದೆ ಮನುಕುಲದ ಪರ ವಹಿಸುತ್ತಾ.
"ಹ್ಹ! ಹೊಯ್ದುಕೊಳ್ಳುವುದರಲ್ಲೂ ಎರಡು ವಿಧ... ಕುಡಿದು ಬಂದ ತಕ್ಷಣ ಮನೆಯಾಕೆ ಎತ್ತರದ ಗಂಟಲಲ್ಲಿ ಹೋ.... ಎಂದು ಹೊಯ್ದುಕೊಳ್ಳುವುದು, ನಂತರ ಕೊಡದಿಂದ ನೀರನ್ನು ಹೊಯ್ದುಕೊಳ್ಳುವುದು. ಅಸಲಿಗೆ ನಿಮ್ಮ ನೀರು ತುಂಬುವ ಹಬ್ಬವೇ ಸರಿಯಿಲ್ಲ."
"ಅದರಲ್ಲೇನಿದಯಪ್ಪ ಡಿಫೆಕ್ಟು?"
"ಆಗಿನ ಕಾಲದಲ್ಲಿ ಬಚ್ಚಲುಮನೆಯ ಹಂಡೆಯ ಸುತ್ತ ಸೊಗಸಾದ ರಂಗೋಲಿ ಇರುತ್ತಿತ್ತು."
"ಈಗ?"
"ಹ್ಹ! ಮನೆಯ ಹೆಂಗಸರೇ ಹಂಡೆಯ ಗಾತ್ರ... ರಂಗೋಲಿ ಹಾಕ್ತೀಯಾಂದ್ರೆ ರಂಗೋಲಿ ಕೋ ಮಾರೋ ಗೋಲಿ ಅನ್ನೋ ನಾರಿಯರೇ ಜಾಸ್ತಿ. ಆಗ ಸೊಂಟದ ಮೇಲೆ ಬಿಂದಿಗೆಯನ್ನ ಬ್ಯಾಲೆನ್ಸ್ ಮಾಡಿಕೊಂಡು ಹೋಗೋ ಬ್ಯೂಟಿಫುಲ್ ಗರ್ಲ್ಸ್‍ನ ನೋಡೋದೇ ಒಂದು ಖುಷಿಯಿತ್ತು ಅಂತ ನಮ್ಮ ಶ್ವಾನ್ ಕ್ರಾನಿಕಲ್ಸ್ನಲ್ಲಿ ದಾಖಲೆಯಾಗಿದೆ. ಹಂಪೆಯಲ್ಲಿ ಸಿಕ್ಕಿರುವ ಒಂದು ನಾಯಿಗೂಡಿನ ಗೋಡೆಯ ಮೇಲೆ ಆಗಿನ ಕಾಲದ ನಾಯಿಯೊಂದು ಬರೆದಿರುವ ನಖಶಾಸನದಲ್ಲಿ ಆ ಉಲ್ಲೇಖ ಇದೆಯಂತೆ."
"ನಖಶಾಸನ? ಹಾಗೆಂದರೆ?"
"ಉಗುರುಗಳಿಂದ ಬರೆದ ಶಾಸನ... ಆಗಿನ ಕಾಲದ ನಾಯಿಗಳಿಗೆ ಒಳ್ಳೆಯ ಫುಡ್ ಸಿಗುತ್ತಿತ್ತಲ್ಲ, ಕಲ್ಲಿನ ಮೇಲೆಯೂ ಕೆತ್ತುವ ಶಕ್ತಿಯುತ ಉಗುರುಗಳು ಇದ್ದವಂತೆ."
"ಓಕೆ. ಶಾಸನದಲ್ಲಿ ಏನೆಂದು ಬರೆದಿತ್ತಂತೆ?"
ಭವ್ಯರಮಣಿಯರು ರಮ್ಯದೊಳೈರಾ-
ಣಿಯನುಂ ರಂಭೆಯ ನಾಳ್ಚಿಪ ಅಂದ-

Comments

  1. ರಂಗೋಲಿ ಕೋ ಮಾರೋ ಗೋಲಿ ಅನ್ನೋ ನಾರಿಯರೇ ಜಾಸ್ತಿ very true sir

    ReplyDelete

Post a Comment