ಪುಸ್ತಕ ಬಿಡುಗಡೆ


ಅಣಕು ರಾಮನಾಥ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮ- ವರದಿ
 
- Badari Thyamagondlu
                       ದೇಶ ಸುತ್ತು ಕೋಶ ಓದು ಎನ್ನುವ ಗಾದೆಯ ಮಾತು ಅವಾಗವಾಗ "ಕೋಟ್" ಮಾಡೋದಿಕ್ಕೆ ಮಾತ್ರಾ ಬಳಕೆಯಾಗುತ್ತಿರುವ ಈ ಸಮಯದಲ್ಲಿ, ನಮ್ಮೆಲ್ಲರನ್ನೂ ನಗಿಸಲೆಂದೇ ಬರೆದ ಕೋಶವನ್ನು ಆಸ್ಟ್ರೇಲಿಯಾ ದೇಶವನ್ನು ಸುತ್ತಿ ಸಿಡ್ನಿ ಕನ್ನಡಿಗರ ಮುಂದೆ ತಾವೇ ಬರೆದಿರುವ ಎರಡು ಕೋಶವನ್ನು (ಪುಸ್ತಕವನ್ನು) ಬಿಡುಗಡೆಗೊಳಿಸಿದ ಹೆಮ್ಮೆ ಅಣಕು ರಾಮನಾಥ್ ಅವರಿಗೆ ಸಲ್ಲುತ್ತದೆ.


ಸಿಡ್ನಿ ಕನ್ನಡಿಗರು ಪ್ರಕಟಿಸುತ್ತಿರುವ "ಹೊರನಾಡ ಚಿಲುಮೆ"ಎಂಬ ಆಸ್ಟ್ರೇಲಿಯಾ ದ ಪ್ರಪ್ರಥಮ ಇ-ಮಾಸಪತ್ರಿಕೆಗೆ ನಿರಂತರ ಬರಹಗಳನ್ನು ಕೊಟ್ಟು ಪ್ರತೀ ತಿಂಗಳೂ ಹಾಸ್ಯವನ್ನು ತಂಗಳಾಗಿಸದೆ ಹೊಸ ರುಚಿಯೊಡನೆ ಉಣಬಡಿಸುತ್ತಿರುವ ರಾಮನಾಥ್ ಅವರು ನಮ್ಮೆಲ್ಲರಿಗೂ ಚಿರಪರಿಚಿತರು. ಅವರು ಅಕ್ಟೋಬರ್ ೨೦೧೮ ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು
ಈ ದೇಶದ ಅಂದ ಚಂದವನ್ನು ತೂಕಮಾಡಿ ಇಲ್ಲಿನ ಜನರೊಡನೆ ಬೆರೆತು ನಮ್ಮ ಮನೆಯವರಾಗಿಯೇ ಬಿಟ್ಟರು. ಸಾತ್ವಿಕ ಸಂಪ್ರದಾಯದಂತೆ, ನೋಡಲು ಹೋಗುವ ಮನೆಗೆ ಹೂ ಹಣ್ಣುಗಳನ್ನು ತೆಗೆದುಕೊಂಡು ಹೋಗುವುದು ವಾಡಿಕೆ. ಅವರು ಅದಕ್ಕಿಂತಲೂ ರಸಭರಿತವಾದ "ಹಾಸ್ಯವಲ್ಲರೀ" ಮತ್ತು "ಅಣಕವಾಡಿನ ಅಂಗಳದಲ್ಲಿ"ಎಂಬ ಎರಡು ಪುಸ್ತಕಗಳನ್ನು ಇಲ್ಲಿಗೆ ತಂದು ಸಿಡ್ನಿಯಲ್ಲೇ ಬಿಡುಗಡೆ ಮಾಡಿಸಿದರು.


ಅಕ್ಟೋಬರ್ ೨೦, ೨೦೧೮ ರಂದು ಸುಗಮ ಕನ್ನಡ ಕೂಟದ ಶ್ರೀ ಕನಕಾಪುರ ನಾರಾಯಣ ಮತ್ತು ಶ್ರೀ ರಾಜಲಕ್ಷ್ಮೀ ಅವರ ಮನೆಯಲ್ಲಿ ಸಂಜೆ ಮಹಾಲಕ್ಷ್ಮಿ ಬರುವ ವೇಳೆಯಲ್ಲಿ ಲಕ್ಷ್ಮೀ ನಾರಾಯಣರಿಗೆ "ನೀವು ಲೋಕ ಪಾಲಕರು" ನಾನು "ಲಾಫ್ ಪಾಲಕ" ಎಂಬ ಭಾವದೊಡನೆ ನಗೆಬುಗ್ಗೆಯ ದೀಪಗಳನ್ನು ಒಂದೊಂದಾಗಿ ಹಚ್ಚುತ್ತಾ ಬಂದರು. ನೆರೆದಿದ್ದ ಸಭಿಕರೆಲ್ಲರೂ ಅವರ ವಿವಿಧ ಧಾಟಿಯ ನಗೆಚಾಟಿಗೆ ಅಳದೆ, ನಕ್ಕೂ ನಕ್ಕೂ ಹಗುರವಾಗಿ ಆನಂದಪಟ್ಟರು. ಅವರು ಹೇಳಿದ ಜೋಕ್ ಇರಬಹುದು, ಜನಪ್ರಿಯ ಗೀತೆಗೆ ಬರೆದ ಅಣಕವಾಡು ಇರಬಹುದು, ಅಥವಾ ಇನ್ಯಾವುದೇ
ಹಾಸ್ಯಚಟಾಕಿ ಇರಬಹುದು, ಶ್ರೀ ರಾಮನಾಥ್ ಅವರ ಪದ ಬಳಕೆಗೆ ಮಾರುಹೋಗದವರೇ ಇರಲಿಲ್ಲ. ಕನ್ನಡದ ಜನಪ್ರಿಯ ಮಾಸಪತ್ರಿಕೆಯಲ್ಲೊಂದಾದ "ಸುಧಾ"ದಲ್ಲಿ ಬರುವ "ನೀವು ಕೇಳಿದಿರಿ" ಗೆ ಉತ್ತರ ಕೊಡುವವರು ನಮ್ಮ ಮುಂದೆಯೇ ಇದ್ದಾರೆ ಎನ್ನುವ ಹೆಮ್ಮೆ ಎಲ್ಲರ ಮೊಗದಲ್ಲೂ ಕಾಣುತ್ತಿತ್ತು.


ಈ ಸಮಾರಂಭದ ವಿಶೇಷವೆಂದರೆ, ಸುಧಾದಲ್ಲಿ "ನೀವು ಕೇಳಿದಿರಿ" ಯಲ್ಲಿ ಹಿಂದೆ ಕೇಳಿದ್ದ ಪ್ರಶ್ನೆಯನ್ನು ಮತ್ತೊಮ್ಮೆ ಸಭಿಕರು ಶ್ರೀ ರಾಮನಾಥ್ ಅವರಿಗೆ ಕೇಳಿ ಅವರು ಕೊಟ್ಟ ವಿಭಿನ್ನ ಉತ್ತರಕ್ಕೆ ತಲೆದೂಗಿ ಖುಷಿ ಪಟ್ಟದ್ದು. ನಂತರ ಸಭೆಗ ಕಳಶವಿಟ್ಟಂತೆ ವಿದೇಶದಲ್ಲಿ ಅಪರೂಪವಾದ ಕನ್ನಡ ಪುಸ್ತಕದ ಬಿಡುಗಡೆಯು ನಡೆಯಿತು. "ಹಾಸ್ಯವಲ್ಲರೀ"ಪುಸ್ತಕವನ್ನು ಡಾ ಅನಂತರಾವ್ ಅವರು ಮತ್ತು "ಅಣಕವಾಡಿನ ಅಂಗಳದಲ್ಲಿ" ಪುಸ್ತಕವನ್ನು ವಾಸುದೇವ ಮೂರ್ತಿಯವರು ಬಿಡುಗಡೆಗೊಳಿಸುವ ಮೂಲಕ ಓದುಗರಿಗೆ ಹಾಸ್ಯಪ್ರವಾಹದ ಕ್ರೆಸ್ಟ್ ಗೇಟ್ ಗಳನ್ನು ತೆರೆದು ಕೊಟ್ಟರು. ಆ ಎರಡು ಪುಸ್ತಕದ ನಗೆಹೊನಲಿನಲ್ಲಿ ಮಿಂದೆದ್ದು ಪುಳಕರಾಗುವ ಸರದಿ ಆಗ ಸಭಿಕರದ್ದು. ಪೈಪೋಟಿ ಎಂಬಂತೆ ತಾ ಮುಂದು ನಾಮುಂದು ಎಂದು ಸರದಿ ಸಾಲಿನಲ್ಲಿ ನಿಂತು ಪುಸ್ತಕವನ್ನು  ಲೇಖಕರಿಂದಲೇ ಹಸ್ತಾಕ್ಷಾರ ಪಡೆದು ಫೋಟೋವನ್ನೂ ಕ್ಲಿಕ್ಕಿಸಿಕೊಂಡರು. ಅಂದು ನೆರೆದಿದ್ದ ಯಾರೇ ಆಗಲಿ, ನಾವಿರುವ ಜಾಗವೆ ಕನ್ನಡ ಗುಡಿ, ನಾವಿರುವ ತಾಣವೆ ಗಂಧದ ಗುಡಿ, ನುಡಿದರಷ್ಟೇ ಉಳಿವುದು ಕನ್ನಡ ನುಡಿ ಎಂಬುದನ್ನು ಮನಗಂಡರು.ಮನಕ್ಕೆ ಪುಸ್ತಕವು ಹಸಿವು ನೀಗಿಸಿದ್ದರೆ, ಹೊಟ್ಟೆಯ ಹಸಿವನ್ನು ಸಿಡ್ನಿಯ ಅನ್ನ ದಾಸೋಹಿಗರು, ವಿವಿಧ ರುಚಿಯಡುಗೆಗಳನ್ನು ತಂದು ನೆರೆದ ಜನಕ್ಕೆ ಪೂರೈಸುವ ಮೂಲಕ ತಮ್ಮ ಅನ್ನಪೂರ್ಣತ್ವವನ್ನು ಪ್ರದರ್ಶಿಸಿದರು. ಅವರಿಗೊಂದು ಥ್ಯಾಂಕ್ಸ್ ಹೇಳದಿದ್ದರೆ ತಪ್ಪಾಗುವುದು.

ಒಟ್ಟಿನಲ್ಲಿ ಬಹು ಅಪರೂಪವಾದ ವಿದೇಶದಲ್ಲಿ ಕನ್ನಡ ಪುಸ್ತಕ ಬಿಡುಗಡೆಯನ್ನು ಸಾಧ್ಯವಾಗಿಸಿದ ಶ್ರೀ ರಾಮನಾಥ್ ಅವರಿಗೂ, ಅವಕಾಶ ಕಲ್ಪಿಸಿದ ಶ್ರೀಮತಿ ಮತ್ತು ಶ್ರೀ ಕನಕಾಪುರ ನಾರಾಯಣ ಮತ್ತವರ ಮಿತ್ರವೃಂದಕ್ಕೂ ಅನಂತಾನಂತ
ವಂದನೆಗಳನ್ನು ಸಲ್ಲಿಸಲೇಬೇಕು.

ವರದಿ: ಬದರಿ ತ್ಯಾಮಗೊಂಡ್ಲು

Comments

  1. Congratulations on the book release

    ReplyDelete
  2. ಅಂದಿನ ಪ್ರತಿ ಕ್ಷಣವೂ ಸುಂದರ. ವಯಸ್ಸಾಗದ ಕ್ಷಣಗಳವು!

    ReplyDelete

Post a Comment