ಬದಲಿ ಹಾಲುಗಳು (milk alternatives)


ಬದಲಿ ಹಾಲುಗಳು (milk alternatives)

ಇವುಗಳಿಂದ ನಮಗೆ ಉಪಯೋಗವಿದೆಯೇ?
- Raji Jayadev Accredited Practicing Dietiian, Sydney


ನೀವು ಸೂಪರ್ ಮಾರ್ಕೆಟ್ ನಲ್ಲಿ ನಾನಾ ತರದ ಬದಲಿ ಹಾಲುಗಳನ್ನು ನೋಡಿರಬಹುದು. ಆಲ್ಮಂಡ್ ಮಿಲ್ಕ್, ರೈಸ್ ಮಿಲ್ಕ್, ಕೊಕೊನಟ್ ಮಿಲ್ಕ್, ಸೋಯಾ ಮಿಲ್ಕ್, ಓಟ್ಸ್ ಮಿಲ್ಕ್ ಇತ್ಯಾದಿ. ಇವುಗಳನ್ನು ಹಸುವಿನ ಹಾಲಿನ ಬದಲು ಉಪಯೋಗಿಸಬಹುದು ಎಂದು ಜಾಹೀರಾತು ಮಾಡುತ್ತಾರೆ. ಕಾರಣ: ಕೆಲವರು ಪ್ರಾಣಿಜನ್ಯ ಯಾವ ಆಹಾರವನ್ನೂ ಸೇವಿಸುವುದಿಲ್ಲ. ಕೆಲವರಿಗೆ ಹಸುವಿನ ಹಾಲು ದೇಹಕ್ಕೆ ಒಗ್ಗುವುದಿಲ್ಲ. ಆದರೆ ಈ ಬದಲಿ ಹಾಲುಗಳನ್ನು ಉಪಯೋಗಿಸುವುದು ಸರಿಯೇ? ಈಗ ನೋಡೋಣ. 


ಹಸುವಿನ ಹಾಲಿನಲ್ಲಿ ದೇಹಕ್ಕೆ ಅಗತ್ಯವಾದ ಹಲವಾರು ಪೋಷಕಾಂಶಗಳಿರುತ್ತವೆ. ಮುಖ್ಯವಾಗಿ ಉತ್ತಮ ಗುಣಮಟ್ಟದ ಪ್ರೋಟೀನು, ವಿಟಮಿನ್ A, B, D, ಮತ್ತು ಕ್ಯಾಲ್ಸಿಯಮ್ ಅಧಿಕವಾಗಿರುತ್ತದೆ. ಬದಲಿ ಹಾಲುಗಳಲ್ಲಿ ಈ ಪೋಷಕಾಂಶಗಳು ಇವೆಯೇ?

ಸೋಯಾ ಹಾಲು  
ಸೋಯಾ ಹಾಲನ್ನು ಎರಡು ವಿಧದಲ್ಲಿ ತಯಾರಿಸುತ್ತಾರೆ.
೧. ಇಡೀ ಸೋಯಾಕಾಳುಗಳನ್ನು ನೆನಸಿ, ಬೇಯಿಸಿ, ರುಬ್ಬಿ, ಹಾಲು ತೆಗೆದು, ಅದಕ್ಕೆ ಬಾರ್ಲಿ, ಸಕ್ಕರೆ, ಸೂರ್ಯಕಾಂತಿ ಎಣ್ಣೆ, ಉಪ್ಪು, ಮುಂತಾದುವುಗಳನ್ನು ಸೇರಿಸುತ್ತಾರೆ. ಇದರಲ್ಲಿ ಕ್ಯಾಲ್ಸಿಯಂ ಅತೀ ಕಡಿಮೆ ಇರುತ್ತದೆ. ಸಾಕಷ್ಟು ಪ್ರೋಟೀನ್ ಮತ್ತು B ವಿಟಮಿನ್ ಗಳಿರುತ್ತವೆ. 

೨. ಸೋಯಾ ಕಾಳುಗಳಿಂದ ತೆಗೆದ ಶುದ್ದ ಪ್ರೋಟೀನ್ (soy protein isolate powder) ಅನ್ನು ಉಪಯೋಗಿಸುತ್ತಾರೆ. ಇದಕ್ಕೆ ಹಸುವಿನ ಹಾಲಿನಲ್ಲಿರುವ ಅನೇಕ ಮಿನರಲ್ಸ್ ಮತ್ತು ವಿಟಮಿನ್ಸ್ ಗಳನ್ನು ಅದೇ ಪ್ರಮಾಣದಲ್ಲಿ ಸೇರಿಸುತ್ತಾರೆ. ಆದ್ದರಿಂದ ಹಸುವಿನ ಹಾಲಿನ ಬದಲು ಉಪಯೋಗಿಸುವುದಕ್ಕೆ ಈ ಹಾಲು ಸೂಕ್ತ. ಆದರೆ, ಶುದ್ದ ಪ್ರೋಟೀನ್ ಕೆಲವರಿಗೆ ಹಾನಿಯುಂಟು ಮಾಡಬಹುದು. ಹಾರ್ಮೋನ್ ಗಳ ಏರುಪೇರುವಿನಿಂದ ಬರುವ ಕ್ಯಾನ್ಸರ್ (ಉದಾ: ಸ್ತನದ ಕ್ಯಾನ್ಸರ್) ಇದ್ದವರು ಮತ್ತು ಈ ಬಗೆಯ ಕ್ಯಾನ್ಸರ್ ಜೀನ್ ಇದ್ದವರು ಈ ಹಾಲಿನ ಸೇವನೆಯನ್ನು ಮಿತಿಯಲ್ಲಿಟ್ಟಿರಬೇಕು.

ಆಲ್ಮಂಡ್ ಮಿಲ್ಕ್ (ಬಾದಾಮಿ ಹಾಲು).
ಬಾದಾಮಿ ಹಾಲು ಎಂದು ಕೇಳಿದ ಕೂಡಲೇ ನಮ್ಮ ಬಾಯಲ್ಲಿ ನೀರೂರುವುದು ಸಹಜ. ಆದರೆ ಇದು ನಮ್ಮ ದೇಶದ ಅಂಗಡಿಗಳಲ್ಲಿ ಸಿಗುವ ಬಾದಾಮಿ ಹಾಲಲ್ಲ. ಬಾದಾಮಿ ಅತ್ಯಂತ ಉತ್ಕೃಷ್ಟ ಆಹಾರ ನಿಜ. ಆದರೆ ‘ಆಲ್ಮಂಡ್ ಮಿಲ್ಕ್’ ನಲ್ಲಿ ಆಲ್ಮಂಡ್ ಇರುವುದು ಕೇವಲ ೨% ಮಾತ್ರ. ಉಳಿದದ್ದೆಲ್ಲಾ ನೀರು, ಹಿಟ್ಟು, ಸಕ್ಕರೆ, ಉಪ್ಪು, ಎಣ್ಣೆ, ಇತ್ಯಾದಿ. ಆದ್ದರಿಂದ ಬಾದಾಮಿಯಲ್ಲಿರುವ ಯಾವ ಪೋಷಕಾಂಶಗಳೂ ಇರುವುದಿಲ್ಲ. ಇದನ್ನು ನಾವೇ ಮನೆಯಲ್ಲಿ ಮಾಡುವುದು ಬಹು ಸುಲಭ. ಬಾದಾಮಿ ಪುಡಿ (ಆಲ್ಮಂಡ್ ಮೀಲ್) ಮಾರ್ಕೆಟ್ ನಲ್ಲಿ ಸಿಗುತ್ತದೆ. ಇದಕ್ಕೆ ನೀರು ಸೇರಿಸಿ ರುಬ್ಬಿ, ರುಚಿಗೆ ಸ್ವಲ್ಪ ಸಕ್ಕರೆ ಸೇರಿಸಬಹುದು.
ಓಟ್ಸ್ ಮಿಲ್ಕ್ (Oat milk) ನಲ್ಲಿ ಸಾಕಷ್ಟು ಪೋಷಕಾಂಶಗಳಿರುತ್ತವೆ. ಆದರೆ ಹಸುವಿನ ಹಾಲಿನಲ್ಲಿರುವಷ್ಟು ಕ್ಯಾಲ್ಸಿಯಂ ಇರುವುದಿಲ್ಲ. ೧೦ – ೧೭% ಓಟ್ಸ್, ಎಣ್ಣೆ ಮತ್ತು ಉಪ್ಪು ಇರುತ್ತದೆ.

ಅಕ್ಕಿ ಹಾಲು (Rice milk) ಮತ್ತು ಕಾಯಿ ಹಾಲು (Coconut milk)
ಪೋಷಕಾಂಶಗಳು ಅತೀ ಕಡಿಮೆ. ಎಣ್ಣೆ, ಉಪ್ಪು,ಕ್ಯಾಲ್ಸಿಯಂ ಮತ್ತು ಹಲವಾರು ರಾಸಾಯನಿಕಗಳನ್ನು  ಹಾಕಿರುತ್ತಾರೆ.

ಈ ಬದಲಿ ಹಾಲುಗಳಲ್ಲಿ ಸಾಕಷ್ಟು ಪ್ರೋಟೀನ್ ಇರುವುದು ಸೋಯಾ ಹಾಲುಗಳಲ್ಲಿ ಮಾತ್ರ. ಇತರ ಬದಲಿ ಹಾಲುಗಳಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಅತಿ ಕಡಿಮೆ ಇರುತ್ತದೆ. ಕೆಲವು ಬ್ರಾಂಡಿನ ಸೋಯಾ ಹಾಲುಗಳಿಗೆ ಮಾತ್ರ ಕ್ಯಾಲ್ಸಿಯಂ ಹಾಕಿರುತ್ತಾರೆ. ನೀವು ಕೊಳ್ಳುವ ಸೋಯಾ ಹಾಲಿನಲ್ಲಿ ಕ್ಯಾಲ್ಸಿಯಂ ಇದೆಯೆಂದು ಖಚಿತ ಪಡಿಸಿಕೊಳ್ಳಬೇಕು. ಹಸುವಿನ ಹಾಲಿಗೆ ಹೋಲಿಸಿದರೆ ಬದಲಿ ಹಾಲುಗಳು ಅತಿ ದುಬಾರಿ. ಹೆಚ್ಚು ಹಣ ಕೊಟ್ಟು ನೀರನ್ನು ಕೊಳ್ಳುತ್ತೀರಿ. ಯಾವುದೇ ಕಾರಣಕ್ಕೆ ಬದಲಿ ಹಾಲುಗಳನ್ನು ಉಪಯೋಗಿಸುವ ಇಚ್ಚೆ ಇದ್ದಲ್ಲಿ ಡಯಟೀಶಿಯನ್ ಸಲಹೆ ಪಡೆಯಿರಿ.

ಈ ಬದಲಿ ಹಾಲುಗಳಿಗೆ milks ಎಂದು ಕರೆಯಬಾರದು, ಏಕೆಂದರೆ ಇವುಗಳಲ್ಲಿ ಹಸುವಿನ ಹಾಲಿನಲ್ಲಿರುವ ಅನೇಕ ಪೋಷಕಾಂಶಗಳು ಇರುವುದಿಲ್ಲ ಎಂದು ಗ್ರಾಹಕರಿಗೆ ತಿಳಿಸಲು ಅವುಗಳನ್ನು mylks ಎಂದು ಹೆಸರಿಸಬೇಕು ಎಂದು ಆಹಾರ ತಜ್ಞರು ಕೇಳುತ್ತಿದ್ದಾರೆ. ಆದರೆ ಸಂಬಂಧಪಟ್ಟ ಇಲಾಖೆ ಇದರ ಬಗ್ಗೆ ಗಮನ ಹರಿಸಿಲ್ಲ.
ಆದ್ದರಿಂದ ನಾವೇ ಈ ವಿಷಯಗಳನ್ನು ತಿಳಿದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಬೆಂಗಳೂರಿನ ಪ್ರಸಿದ್ದ ಮನೋವಿಜ್ಞಾನಿ ಡಾಕ್ಟರ್ ಚಂದ್ರಶೇಖರ್ ಅವರು ಬರೆದ ಒಂದು ಪುಸ್ತಕದಲ್ಲಿ ಹೇಳಿದಂತೆ ಆರೋಗ್ಯ, ಅನಾರೋಗ್ಯ, ಆಯ್ಕೆ ನಿಮ್ಮದು.
 


Comments

  1. ತಮ್ಮ ಲೇಖನದಲ್ಲಿ ಸಿಗುವ ಮಾಹಿತಿ ತುಂಬಾ ಮಹತ್ವದ್ದಾಗಿದೆ. ಇಷ್ಟು ದಿನ ಹಸುವಿನ ಹಾಲು ಸೇವಿಸಿದ್ದ ಸಮಾಧಾನವಿದೆ. ತುಂಬಾ ಧನ್ಯವಾದಗಳು. ಕ್ಯಾಲ್ಸಿಯಂ ಉಪ್ಪು ಹಾಗೂ ಪೋಷ್ಟಿಕಾಂಶ ಇದರ ಅವಶ್ಯಕತೆ ಮತ್ತು ಅರಿವು ಮೂಡಿಸುತ್ತದೆ ತಮ್ಮ ಲೇಖನ. - Narayana

    ReplyDelete
  2. I read the alternative milks article. I found it very informative and useful - Rama Deshpande

    ReplyDelete
    Replies
    1. Dear Naani, we do not need salt (sodium chloride). We get enough sodium from foods we eat. thank you for your feed back.

      Thanks Rama, happy to know that the article was useful to you.

      Delete

Post a Comment