ದ್ರೌಪದಿಯ ಪ್ರಜ್ಞಾವಂತಿಕೆ

 ದ್ರೌಪದಿಯ ಪ್ರಜ್ಞಾವಂತಿಕೆ 
- Dr C V Madhusudana

ರಾಮಲಕ್ಷ್ಮಣರು ಸೀತೆಯನ್ನು ಅರಸಿ ದಂಡಕಾರಣ್ಯದಲ್ಲಿ ಅಲೆಯುತ್ತಿದ್ದಾಗ ಅವರಿಗೆ ಶಾಪಗ್ರಸ್ತನಾಗಿ ಘೋರ ರಾಕ್ಷಸನ ರೂಪದಲ್ಲಿ ಸಂಚರಿಸುತ್ತಿದ್ದ ಕಬಂಧನ ಎದುರಾಯಿತು. ಅವರಿಂದ ಕಬಂಧನ ಶಾಪವಿಮೋಚನೆಯಾಗಿ ಪೂರ್ವದ ಸುಂದರಾಕೃತಿಯು ಬಂದ ನಂತರ ಅವನು ಅವರಿಗೆ “ಇಲ್ಲಿಗೆ ಸಮೀಪದಲ್ಲೇ ಶಬರಿ ಎಂಬ ವೃದ್ಧ ತಾಪಸಿಯು ನಿಮ್ಮ ಆಗಮನವನ್ನೇ ಎದುರು ನೋಡುತ್ತಾ ತನ್ನ ಜೀವಗಳನ್ನು ಹಿಡಿದಿಟ್ಟಿಕೊಂಡಿದ್ದಾಳೆ, ನೀವು ದಯವಿಟ್ಟು ಅವಳನ್ನು ಸಂದರ್ಶಿಸಬೇಕು” ಎಂದು ಕೇಳಿಕೊಂಡನು. ಅದರಂತೆ ರಾಮಲಕ್ಷ್ಮಣರು ಶಬರಿಯ ಆಶ್ರಮಕ್ಕೆ ಹೋಗಿ ಅವಳ ಆತಿಥ್ಯವನ್ನು ಸ್ವೀಕರಿಸಿದರು. ಅನಂತರ ಶ್ರೀರಾಮನು ಆಕೆಗೆ ನವಧಾ ಭಕ್ತಿ ಎಂದರೆ ಭಕ್ತಿಯನ್ನು ಸಾಧಿಸುವ ಒಂಬತ್ತು ಬಗೆಗಳನ್ನು ವಿವರಿಸುತ್ತಾನೆ (ಈ ಕಥೆ ಅಧ್ಯಾತ್ಮ ರಾಮಾಯಣದಲ್ಲೂ, ತುಳಸೀದಾಸರ ರಾಮಚರಿತಮಾನಸದಲ್ಲೂ ಕಾಣಸಿಗುತ್ತದೆ; ವಾಲ್ಮೀಕಿ ರಾಮಾಯಣದಲ್ಲಿ ಕಂಡುಬರುವದಿಲ್ಲ). ಈ ಒಂಭತ್ತು ವಿಧಗಳು ಯಾವುವೆಂದರೆ:
1.    ಸಜ್ಜನರ ಸಂಗ
2.    ಪರಮಾತ್ಮನ ಕಥೆಗಳನ್ನು ವಾಚಿಸುವುದು
3.    ಪರಮಾತ್ಮನ ವೈಭವಗಳನ್ನು ಹಾಡುವುದು
4.    ಪರಮಾತ್ಮನ ಉಪದೇಶಗಳನ್ನು ಕೇಳಿ ಅರ್ಥ ಮಾಡಿಕೊಳ್ಳುವುದು
5.    ಗುರುವೇ ಪರಮಾತ್ಮನೆಂದು ತಿಳಿದು ಅವನನ್ನು ಪೂಜಿಸುವುದು, ಪುಣ್ಯಕಾರ್ಯಗಳನ್ನು ಮಾಡುವುದು, ಇಂದ್ರಿಯಗಳನ್ನು ಹತೋಟಿಯಲ್ಲಿಡುವುದು ಮತ್ತು ಬಾಹ್ಯದಲ್ಲೂ ಶುದ್ಧವಾಗಿರುವುದು
6.    ನಿತ್ಯವೂ ನಿಷ್ಥೆಯಿಂದ ಪರಮಾತ್ಮನನ್ನು ಪೂಜಿಸುದು
7.    ಸಾಂಗವಾಗಿ ಪರಮಾತ್ಮನ ಮಂತ್ರೋಪಾಸನೆ ಮಾಡುವುದು
8.    ಪರಮಾತ್ಮನ ಭಕ್ತರ ಪೂಜೆ; ಎಲ್ಲ ಜೀವಿಗಳಲ್ಲೂ ಪರಮಾತ್ಮನನ್ನು ಕಾಣುವುದು; ಹೊರಗಿನ ವಿಷಯಗಳಲ್ಲಿ ನಿರಾಸಕ್ತಿ; ಸ್ವಯಂ ನಿಯಂತ್ರಣ.
9.    ಪರಮಾತ್ಮನ ತತ್ತ್ವ ವಿಚಾರ ಮಾಡುವುದು.
ಈ ಪಟ್ಟಿಯಲ್ಲಿ ಮೊಟ್ಟ ಮೊದಲನೆಯದು “ಸಜ್ಜನರ ಸಂಗ” ಎಂಬುದನ್ನು ಗಮನಿಸಿ. ಇದು ಮಾತ್ರವಲ್ಲ, ಸ್ವಯಂ ಶ್ರೀ ರಾಮನೇ ಒಂಭತ್ತು ವಿಧಗಳನ್ನು ತಿಳಿಸಿದ ಬಳಿಕ “ಈ ಒಂಭತ್ತು ಮಾರ್ಗಗಳಲ್ಲಿ ಮೊದಲನೆಯದನ್ನು, ಎಂದರೆ ಸತ್ಸಂಗವನ್ನು, ಯಾರು ಸಾಧಿಸುವರೋ ಅವರಿಗೆ ಇತರ ಭಕ್ತಿ ಮಾರ್ಗಗಳು ತಾವಾಗಿಯೇ ದೊರಕುವುವು” ಎಂದು ಶಬರಿಗೆ ಉಪದೇಶಿಸುತ್ತಾನೆ.
ಈ ಮೇಲಿನ ಪೀಠಿಕೆಯಿಂದ ಸತ್ಸಂಗವನ್ನು ಪಡೆಯಲು ಎಷ್ಟು ಶ್ರಮಪಟ್ಟರೂ ಅದು ಸಾರ್ಥಕವೇ ಎಂಬ ಅರಿವಾಗುತ್ತದೆ. ಇದರ ವಿಷಯವಾಗಿ ಒಂದು ಕಥೆಯನ್ನು ಹೇಳಬಹುದು. ಈ ಕಥೆಯನ್ನು ದಿವಂಗತ ಮಹಾದೇವ ಪ್ರಭಾಕರ ಪೂಜಾರ ಎಂಬ ಪಂಡಿತರು 1923 ರಲ್ಲಿ ಬರೆದ “ಸತ್ಕಥಾಲಾಪ” ಎಂಬ ಸಂಕಲನದಿಂದ ಸಂಗ್ರಹಿಸಲಾಗಿದೆ. ಅಲ್ಲಲ್ಲಿ ಸೂಕ್ತವೆನಿಸಿದ ಮಾರ್ಪಾಟುಗಳನ್ನು ಮಾಡಿದ್ದೇನೆ.


ಮಹಾಭಾರತ ಯುದ್ಧವಾದ ಬಳಿಕ ಯುಧಿಷ್ಠಿರ ಮಹಾರಾಜನು ಅಶ್ವಮೇಧ ಯಜ್ಞವನ್ನು ಮಾಡಿದ್ದನು. ಆ ಸಮಯದಲ್ಲಿ ಶ್ರೀಕೃಷ್ಣನು ಯಾಗಶಾಲೆಯಲ್ಲಿ ಒಂದು ಗಂಟೆಯನ್ನು ತೂಗುಹಾಕಿದ್ದನು; ಮತ್ತು ಅಶ್ವಮೇಧವು ಸಾಂಗವಾಗಿ ಪೂರ್ಣವಾದ ಕೂಡಲೇ ಈ ಗಂಟೆ ತಾನಾಗಿ ಬಾರಿಸುವುದು ಎಂದು ಹೇಳಿದ್ದನು. ಯಜ್ಞದ ಪೂರ್ಣಾಹುತಿಯಾಯಿತು; ಆವಭೃಥ ಸ್ನಾನವಾಯಿತು; ಅನ್ನ ಸಂತರ್ಪಣೆಯಾಯಿತು; ಅದರೂ ಗಂಟೆ ಬಾರಿಸಲಿಲ್ಲ. ಎಲ್ಲರೂ ಒಬ್ಬರ ಮುಖವನ್ನೊಬ್ಬರು ನೋಡತೊಡಗಿದರು. ಆಗ ಶ್ರೀಕೃಷ್ಣನು “ಇಲ್ಲಿ ಯಾರಾದರೂ ಊಟ ಮಾಡದೇ ಉಳಿದಿರುವರೇ ಎಂದು ನೋಡಿರಿ” ಎಂದು ಹೇಳಿದನು. ಆಗ ಔತಣಕ್ಕೆ ಕರೆದಿದ್ದ ಒಬ್ಬ ಸಾಧುವು ಊಟಕ್ಕೆ ಬಂದಿರಲಿಲ್ಲ ಎಂದು ತಿಳಿಯಿತು.
ಕೂಡಲೇ ಭೀಮಸೇನನು ರಥವನ್ನೇರಿ ಆ ಸಾಧುವನ್ನು ಕರೆತರಲು ಹೊರಟನು. ಸಾಧುವು “ನೀವು ಮಾಡಿರುವ ಅಶ್ವಮೇಧದ ಫಲವನ್ನು ನನಗೆ ಕೊಟ್ಟ ಹೊರತು ನಾನು ಊಟಕ್ಕೆ ಬರುವುದಿಲ್ಲ” ಎಂದು ಹೇಳಿಬಿಟ್ಟನು. ಪಾಂಡವರು ಯುದ್ಧದಲ್ಲಾದ ಬಂಧುವಧ ಪಾತಕದಿಂದ ಮುಕ್ತರಾಗಲು ಅತ್ಯಂತ ಶ್ರಮದಿಂದ ಈ ಯಾಗವನ್ನು ಮಾಡಿದ್ದರು. ಅದರ ಫಲವನ್ನು ಹೇಗೆ ಕೊಟ್ಟುಬಿಡಲು ಆದೀತು? ಭೀಮನು ಖಿನ್ನನಾಗಿ ಹಿಂತಿರುಗಿದನು. ಏನು ಮಾಡಬೇಕೆಂದು ಯಾರಿಗೂ ತೋರಲಿಲ್ಲ. ಆಗ ಶ್ರೀಕೃಷ್ಣನೂ ಸಮೀಪದಲ್ಲಿರಲಿಲ್ಲ.
ಆಗ ದ್ರೌಪದಿಯು “ನಾನು ಸಾಧುವನ್ನು ಕರೆದುಕೊಂಡು ಬರುತ್ತೇನೆ. ನನಗೆ ರಥದ ಅಗತ್ಯವಿಲ್ಲ, ನಡೆದುಕೊಂಡೇ ಹೋಗುತ್ತೇನೆ” ಎಂದು ಹೊರಟುಬಿಟ್ಟಳು. ಸಾಧುವು ದ್ರೌಪದಿಗೂ ಅದೇ ಉತ್ತರವನ್ನು ಕೊಟ್ಟನು. ಆಗ ಆಕೆ “ಸ್ವಾಮಿ! ಸಜ್ಜನರನ್ನು ದರ್ಶಿಸಬೇಕಾದರೆ ನಾವು ನಡೆಯುವ ಒಂದೊಂದು ಹೆಜ್ಜೆಗೂ ಒಂದೊಂದು ಅಶ್ವಮೇಧ ಮಾಡಿದ ಫಲವಿದೆಯೆಂದು ತಿಳಿದವರು ಹೇಳುತ್ತಾರೆ. ನಾನು ನಿಮ್ಮ ದರ್ಶನಕ್ಕೋಸ್ಕರವಾಗಿ ಸಾವಿರಕ್ಕೂ ಹೆಚ್ಚು ಹೆಜ್ಜೆಗಳನ್ನು ಹಾಕಿರುವೆನು. ಹಾಗಾಗಿ ನನಗೆ ಸಾವಿರಕ್ಕೂ ಹೆಚ್ಚು ಅಶ್ವಮೇಧಗಳ ಫಲವು ದೊರಕಿದೆ. ಅವುಗಳಲ್ಲಿ ಒಂದನ್ನು ಸ್ವೀಕರಿಸಿ ತಾವು ದಯಮಾಡಿ ಊಟಕ್ಕೆ ಬರಬೇಕು” ಎಂದು ಕೇಳಿಕೊಂಡಳು. ಈ ಮಾತನ್ನು ಕೇಳಿ ಸಾಧುವು ಸಂತೋಷಭರಿತನಾಗಿ
ಊಟಕ್ಕೆ ಬಂದನು; ಗಂಟೆಯೂ ಬಾರಿಸಿತು!
ಸಾಧುವಿನ ಆಗಮನಕ್ಕೆ ಕಾರಣ “ಸಾಧುಸಂತರ ದರ್ಶನಕ್ಕೆಂದರೆ ಹೆಜ್ಜೆಗೊಂದು ಅಶ್ವಮೇಧಫಲ” ಎಂಬ ಮಾತಿನಲ್ಲಿ ನಂಬಿಕೆಯೋ, ಅಥವಾ ದ್ರೌಪದಿಯ ಚತುರತೆಯೋ, ಅಥವಾ ಆಕೆಯ ನಮ್ರತೆಯೋ, ಓದುಗರೇ ನಿರ್ಧರಿಸಬೇಕು.

Comments

  1. ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಎಂಬ ಮಾತಿದೆ. ಹೊರನಾಡ ಚಿಲುಮೆಯ ಮೂಲಕ ನಿಮ್ಮಂತಹ ಸಜ್ಜನರ ಸಹವಾಸ ನಮ್ಮೆಲ್ಲರಿಗೂ ದೊರಕುತ್ತಿದೆ.🙏

    ReplyDelete
  2. ಡಾ. ಮಧುಸೂದನ ರ ಲೇಖನಗಳು ನಿಮ್ಮ ಪತ್ರಿಕೆಗೆ ಭೂಷಣಪ್ರಾಯ. ಅವರ ಲೇಖನಗಳು ಸದಾ ಏನಾದರೊಂದು ಹೊಸತನ್ನು ತಿಳಿಸಿಕೊಡುತ್ತವೆ. ಅವರಿಂದ ನಿರಂತರ ಬರಹಗಳನ್ನು ನಿಮ್ಮ ಪತ್ರಿಕೆಯಲ್ಲಿ ನಿರೀಕ್ಷಿಸುತ್ತೇನೆ.

    ReplyDelete
  3. ಭಕ್ತಿಯ ವಿಷಯದಿಂದ ಆರಂಭವಾಗಿ ವಾಲ್ಮೀಕಿ ರಾಮಾಯಣದಲ್ಲಿ ಕಾಣಸಿಗದ ಒಂಭತ್ತು ವಿಧ ಭಕ್ತಿ ಪರಿಚಯಿಸಿ ಸತ್ಸಂಗವನ್ನು ಒತ್ತಿಹೇಳುತ್ತಾ ರಾಮಾಯಣ-ಮಹಾಭಾರತ ಇವೆರೆಡರ ಸನ್ನಿವೇಶವನ್ನೂ ಒಟ್ಟಿಗೆ ಒಂದೇ ಲೇಖನದಲ್ಲಿ ತಿಳಿಸುವ ಒಳ್ಳೆಯ ಲೇಖನ ಕೊಟ್ಟಿದ್ದೀರಿ, ಧನ್ಯವಾದಗಳು.

    ReplyDelete
  4. I think its ದ್ರೌಪದಿಯ ಚತುರತೆ. Very short but nice article. ope you can write more sir

    ReplyDelete

Post a Comment