ಒಂದು ಚುಕ್ಕಿಯ ಸುತ್ತ

ಒಂದು ಚುಕ್ಕಿಯ ಸುತ್ತ 
-Anaku Ramnatha
 
.

ಇಷ್ಟೇ ಸಾರ್ ನಾನು ಟ್ವೀಟ್ ಮಾಡಿದ್ದು. ಶುರುವಾಯ್ತು ಕಾಮೆಂಟ್ಗಳ ಮಹಾಪೂರ.


ವಾಹ್! ಸೂಪರ್. "ಅಣ್ಣಾ ನಿನ್ನ ಸೋದರಿಯನ್ನ ಮರೆಯದಿರೂ ಎಂದೆಂದು" ಎಂಬ ಗೀತೆ ನೆನಪಾಗುತ್ತಿದೆ. ಆ ಚಿತ್ರದಲ್ಲೂ ಅಣ್ಣ ತಂಗಿಯ ಕುಂಕುಮಸೌಭಾಗ್ಯಕ್ಕೆಂದು ಬಹಳವೇ ಶ್ರಮಿಸುತ್ತಾನೆ. ಈ ಟ್ವೀಟ್ನಲ್ಲಿ ಕುಂಕುಮವನ್ನು ದೀಪಾವಳಿಯ ಸಮಯದಲ್ಲಿ ಮಂಡಿಸಿರುವವರು ಯಾರೋ ಸನಾತನ ಧರ್ಮದ ಹರಿಕಾರರೇ ಇರಬೇಕು. ಅವರಿಗೆ ನನ್ನ ದೀರ್ಘದಂಡ ನಮಸ್ಕಾರ ಎಂದಿತು ಸಂಸ್ಕೃತಿ ಸಿಸ್ಟರ್ಸ್ ಗಿಲ್ಡ್ನ ಟ್ವೀಟ್.


ಮೊದಲಿನಿಂದಲೂ ಇವನು ಬಹುಸಂಖ್ಯಾತರ ಕಡೆಯವನು ಅಂತ ನನಗೆ ಗೊತ್ತಿತ್ತು. ತನ್ನ ಧರ್ಮದ ಸಂಕೇತವಾದ ಕುಂಕುಮದ ಬೊಟ್ಟನ್ನ ಇಲ್ಲಿ ಪೋಸ್ಟ್ ಮಾಡಿರೋದ್ರಿಂದ ಇವನು ಕಮಲಿನಿಯ ಕಡೆಯವನೇ. ಈ ಚುಕ್ಕೆಯನ್ನು ಕಂಡರೆ ಅದೇಕೋ ನನಗೆ ನಮಸ್ತೇ ಸದಾ ವತ್ಸಲೆ ನೆನಪಾಗುತ್ತಿದೆ. ಕಮಲಿನಿಯ ಬಾಡಿ ಗಾರ್ಡ್ ಆದ ಬಿದುರುಕೋಲಣ್ಣನ ಸಂಘದ ಕೈವಾಡ ನನಗೆ ಗೋಚರವಾಗುತ್ತಿದೆ. ಕಮಲಿನಿಗೆ ಧಿಕ್ಕಾರ, ಬಿದಿರುಕೋಲಣ್ಣನಿಗೆ  ಧಿಕ್ಕಾರ ಎಂದಿತು ಗಫೂರ್ ಹ್ಯಾರಿಸನ್ನ ಟ್ವೀಟ್. 

ಧಿಕ್ಕಾರವಿರಲಿ. ಆಧುನಿಕ ಲೋಕದಲ್ಲಿ ಹೆಣ್ಣನ್ನು ದಾಸ್ಯದ ಸಂಕೋಲೆಯಲ್ಲಿ ಬಂಧಿಸಲು ಬಳಸುವಂತಹ ಈ ಕುಂಕುಮದ ಸಂಕೇತವಾದ ಚುಕ್ಕಿಯನ್ನು ಇಟ್ಟವರು ಖಂಡಿತವಾಗಿ ಸ್ತ್ರೀಶೋಷಕರೇ ಆಗಿರುತ್ತಾರೆ. ಇಂತಹವರ ಮನೆಯ ಮುಂದೆ ಧರಣಿ ಕೂರುವುದರ ಮೂಲಕ ನಮ್ಮ ಸ್ತ್ರೀಶಕ್ತಿ ಏನೆಂದು ತೋರಿಸಿಯೇಬಿಡುತ್ತೇವೆ ಎಂದು ಗುಡುಗಿತು ಲಯನೆಸ್ ದುರ್ಗಾಂಬೆಯ ಟ್ವೀಟ್. 

ಈತನನ್ನು ಇಷ್ಟಕ್ಕೇ ಬಿಡಬಾರದು. ಇಂದಿನ ಬಿಂದುವೇ ನಾಳೆಯ ರೇಖೆ. ಅಷ್ಟು ಸುಂದರವಾದ ಬಿಳಿಯ ಹಾಳೆಯನ್ನು ಈ ಚುಕ್ಕಿ ಇಡುವುದರ ಮೂಲಕ ಕೆಡಿಸಲು ಇವನಿಗೆ ಮನಸ್ಸಾದರೂ ಹೇಗೆ ಬಂದಿತು? ಇದು ಬಿಳಿ ಹಾಳೆಯ ಮೇಲೆ ನಡೆದ ಅತ್ಯಾಚಾರ, ಮಾನಭಂಗ, ದಬ್ಬಾಳಿಕೆ, ಶೋಷಣೆ, ಅಸಹಿಷ್ಣುತೆ ಎಂದು ಟ್ವೀಟಿಸಿತು ಅಸಹಿಷ್ಣುತೆ ಬ್ರಿಗೇಡ್.

ಶುದ್ಧ ದಡ್ಡರು. ಇದು ಕುಂಕುಮದ ಸಂಕೇತವಲ್ಲ, ಏಕೆಂದರೆ ಇದರ ಬಣ್ಣ ಕಪ್ಪು. ಇದು ಮೊದಲಿನಿಂದಲೂ ಕಪ್ಪುಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಪುರಾತನ ಪಕ್ಷದ ಕೈವಾಡವೇ ಇರಬೇಕು. ಪುರಾತನ ಪಕ್ಷ ಇದ್ದಲ್ಲಿ ಕಪ್ಪುಹಣ, ಕಾಳಸಂತೆ, ಕರಾಳ ದಿನಗಳು ಎಲ್ಲವೂ ಇರುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. ಪುರಾತನ ಪಕ್ಷಕ್ಕೆ ಧಿಕ್ಕಾರ. ಅದರ ಹಸ್ತ ಅಸ್ತವಾಗಲಿ ಎಂದು ಅರಚಿದ ಸಾರ್ವಜನಿಕ ವಾಹಿನಿಯ ಟ್ರಬಲ್ ಮಾಂಗರ್ ಟಿಂಗಣ್ಣ.

ಇದು ಯಾರೋ ಶಿವರಾಜಕುಮಾರ್ ಅಭಿಮಾನಿಯ ಕೆಲಸವೇ ಆಗಿದೆ. ಯಾರಿಟ್ಟರೀ ಚುಕ್ಕೀ... ಯಾಕಿಟ್ಟರೀ ಚುಕ್ಕೀ... ಎಂಬ ಹಾಡಿನ ಗಾಢವಾದ ಪ್ರಭಾವ ಇವರ ಮೇಲೆ ಆಗಿರುವುದೇ ಇದಕ್ಕೆ ಸಾಕ್ಷಿ. ಸಿವಣ್ಣಾಗೇ ಜೈ, ಅಣ್ಣಾವ್ರೂಗೇ ಜೈ ಎಂದಿತೊಂದು ಹನ್ನಾವ್ರ ಶಂಕದ ಟ್ವೀಟ್.

ಐ ಆಮ್ ಸೋ ಸಾರಿ. ಇದು ಕನ್ನಡ ಚಲನಚಿತ್ರ ಪ್ರೇಮಿ ಇಟ್ಟ ಚುಕ್ಕಿಯಲ್ಲ. ಇದು ಮೆಹಮೂದ್ ಅಭಿಮಾನಿಯದೇ ಕೆಲಸ. ಪಡೋಸನ್ ಚಿತ್ರದಲ್ಲಿ ಮೆಹಮೂದ್ ಪ್ರೇಮಿಸುವ ಹೀರೋಯಿನ್ ಹೆಸರು ಬಿಂದು. ಬಿಂದು ಎಂದರೆ ಪಾಯಿಂಟ್. ಪಾಯಿಂಟ್ ಎಂದರೆ ಚುಕ್ಕಿ. ಇದು ಆ ಬ್ಯೂಟಿಫುಲ್ ಹೀರೋಯಿನ್ನ ಸಂಕೇತ. ಮೇರೆ ಸಾಮನೆ ವಾಲೇ ಕಿಟಕಿ ಮೆ ಏಕ್ ಚಾಂದ್ ಕಿ ಟುಕಡಾ ರೆಹತಾ ಹೈ... ಎಂದಿತೊಂದು ಪುರಾನಿ ಫಿಲ್ಮಿ ದುನಿಯಾದ ಟ್ವೀಟ್

ಈ ಚುಕ್ಕಿ ಇಲ್ಲಿ ಬರಬೇಕಾದರೆ ಇದಕ್ಕೊಂದು ಹಿನ್ನೆಲೆ ಇದ್ದೇ ಇರುತ್ತದೆ. ಎಲ್ಲಿಯೋ ಬರೆದಿರುವ ವಾಕ್ಯವೊಂದರ ಫುಲ್‍ಸ್ಟಾಪ್ ಇದು ಆಗಿರುತ್ತದೆ ಎಂಬುದು ನಿಃಸಂಶಯ. ಈ ವಿಷಯವನ್ನು ಗಮನಿಸಿದರೆ ಇದರಲ್ಲಿ ನನಗೆ ರಾಜಕೀಯದ ವಾಸನೆ ಗೋಚರವಾಗುತ್ತಿದೆ. ಎಲ್ಲಿಯೋ ರಾಜಕಾರಣಕ್ಕಿಳಿದು, ಯಾವುದೋ ಪಕ್ಷ ಕಟ್ಟಿ, ಅದನ್ನು ಮುಗಿಸಿ, ಇನ್ನಾವುದೋ ಪಕ್ಷದಲ್ಲಿ ನಿಂತವನಂತೆ ಈ ಚುಕ್ಕಿ ನನಗೆ ಕಾಣಿಸುತ್ತಿದೆ. ಈ ಚುಕ್ಕಿ ವಾಕ್ಯವನ್ನು ಬಿಟ್ಟು ಇಲ್ಲಿ ಬಂದಿರಬೇಕೆಂದರೆ ಇದರ ಹಿಂದೆ ಏನೋ ಕುಟಿಲತೆ ಇರಲೇಬೇಕು ಟ್ವೀಟಿಸಿದ ಸುದ್ದಿವಾಹಿನಿಗಳ ಪರ್ಮನೆಂಟ್ ಪ್ಯಾನಲ್ ಡಿಸ್ಕಷನ್ ಎಕ್ಸ್‍ಪರ್ಟ್.

ಗಮನಿಸಿ ವೀಕ್ಷಕರೆ, ಈ ಚುಕ್ಕಿಯ ಬಣ್ಣ ಕಪ್ಪು. ಕಪ್ಪುಚುಕ್ಕೆ ಕಳಂಕದ ಸಂಕೇತ. ಟ್ವಿಟರ್ ಒಂದು ಅತ್ಯುತ್ತಮವಾದ ಸಾಮಾಜಿಕ ಜಾಲತಾಣ. ಅದಕ್ಕೊಂದು ಕಪ್ಪುಚುಕ್ಕೆ ಇಡುವುದರ ಮೂಲಕ ಅದನ್ನು ಅಗೌರವಿಸುವ ಇವರ ವಿರುದ್ಧ ಹೋರಾಡಲು ಇಡೀ ಟ್ವಿಟರಾಟಿ ಒಂದಾಗಬೇಕೆಂದು ಕೋರಿಕೊಳ್ಳುತ್ತೇನೆ ಎಂದಿತು ಮೈಸೂರಿನ ಬು.ಜೀ. ದೇವಯ್ಯನ ಟ್ವೀಟ್.

ಡೇಯ್ ತೇವಯ್ಯ, ಸರ್ರಿಯಾ ಪಾರುಡಾ... ನಲ್ಲ ಇರಕ್ಕರ ಪಸಂಗಳ ಮೊಹದ ಮ್ಯಾಲೆ ಸುಕ್ಕೆ ವೆಕ್ಕಿರಾಂಗ. ಪುರಚ್ಚಿ ತಲೈವಿ ಚಯಲಲಿದಾ ಮೊಹಂ ಮೇಲೆ ಒರು ಸುಕ್ಕಿ ಇರಂದದಿ. ಎವಳ ನಲ್ಲ ಇರಿಂದಾಳು ತೆರಿಮಾ... ಚುಮ್ಮ ಒಣ್ಣುಮೇ ತೆರಿಯಾದೆ ಪೇಸಾದೆ. ಡ್ವಿಡ್ಡರು ನಲ್ಲ ಇರಕ್ಕಿದಿ. ಅದಕು ತೃಷ್ಟಿ ಆವಾದ ಮಾದರಿ ಇರುಣುಮನ್ನಾ ಸುಕ್ಕಿ ವೆಕ್ಕಿಣುಮುಡಾ. ನೆಕ್ಸ್ಟ್ ಟೈಮ್ ಗೊಂಜ ಏಸ್ನೆ ಪಣ್ಣಿ ಡ್ವೀಡ್ ಪಣ್ಣೊಂಗೋ ಎಂದು ಬು.ಜೀ.ಯ ಟ್ವೀಟಿಗೆ ಉತ್ತರಿಸಿತೊಂದು ಕನ್ನಟ ಸಗ್ತಿ ಸಂಕದ ಟ್ವೀಟ್.

ಇದು ಪತ್ರಕರ್ತೆಯ ಹಂತಕರ ಕೆಲಸವೇ ಇರಬೇಕು. ಚಿಕ್ಕದಾದ ಟಾರ್ಗೆಟ್ಗೆ ಗುಂಡು ಹಾರಿಸಲು ಪ್ರಾಕ್ಟೀಸ್ ಮಾಡಲೆಂದು ಈ ಚುಕ್ಕಿಯನ್ನು ಒಂದು ಗೋಡೆಯ ಮೇಲೆ ಇಟ್ಟು, ಚುಕ್ಕಿಗೆ ಗುಂಡು ಹೊಡೆಯುವ ಪ್ರಾಕ್ಟೀಸ್ ಮಾಡಿರಬೇಕು. ಗೋಡೆಯ ಮೇಲಿನ ಚುಕ್ಕಿಯ ಫೋಟೋ ತೆಗೆದು ಈ ಪಾಪಿ ಇಲ್ಲಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರಬೇಕು. ಅಲ್ಲಿಗೆ ಪತ್ರಕರ್ತೆಯ ಹಂತಕರು ಈ ಚುಕ್ಕಿ ಇಟ್ಟವನಿಗೆ ತಿಳಿದಿರುವ ಸಾಧ್ಯತೆ ಇದೆಯೆಂದಾಯಿತು. ಬಂಧಿಸಿರಿ ಇವನನ್ನು ಎಂದಿತು ಅನುಮಾನ್ ಅಸೋಸಿಯೇಟ್ಸ್ನ ಟ್ವೀಟ್.

ಒಂದು ಚುಕ್ಕಿಯಿಂದ ಇಷ್ಟೆಲ್ಲ ರಗಳೆಯಾದುದನ್ನು ಕಂಡು ಚುಕ್ಕಿಯನ್ನು ಅಳಿಸಿಹಾಕಿದೆ.

ಸನಾತನ ಸಂಸ್ಕೃತಿಯ ಸಂಕೇತವಾದ ಕುಂಕುಮದ ಬೊಟ್ಟನ್ನು ಅಳಿಸುವುದರ ಮೂಲಕ ನಮ್ಮ ಸಂಸ್ಕೃತಿಗೆ ಅವಮಾನ ಮಾಡುತ್ತಿರುವ ಈ ಟ್ವೀಟ್ ಪೀಡೆಯ ವಿರುದ್ಧ ಟೌನ್ಹಾಲ್ನ ಮುಂದೆ ಧರಣಿ ಹೂಡುತ್ತೇವೆ ಎಂದಿತು ವಾಟವಿಲ್ಲದ ನಾಗಪ್ಪನ ಪಕ್ಷದ ಟ್ವೀಟ್

ನೆನ್ನೆಯಿದ್ದ ಚುಕ್ಕಿ ಇಂದಿಲ್ಲವೆಂದಮೇಲೆ ಈತ ಕೊಲೆಯಲ್ಲಿ ಭಾಗಿಯಾಗಿರಲೇಬೇಕು. ಚುಕ್ಕಿ ಅಳಿಸಿದುದು ಸಪ್ರೆಷನ್ ಆಫ್ ಫಾಕ್ಟ್ ಎಂದಿತು ಅನುಮಾನ್ ಅಸೋಸಿಯೇಟ್ಸ್ನ ಲೇಟೆಸ್ಟ್ ಟ್ವೀಟ್.

ನಾನು ಟ್ವಿಟರ್ ಅಕೌಂಟ್ ಕ್ಲೋಸ್ ಮಾಡಿ ಹೊರಬಂದೆ.

Comments

  1. ಒಂದು ಸಣ್ಣ ಚುಕ್ಕಿ ಮೇಲೆ ಇಷ್ಟು ಸಕತ್ತಾಗಿ ಬರಿತೀರಲ್ಲ ಇನ್ನು ಆಸ್ಟ್ರೇಲಿಯಾದ map ಕೊಟ್ಟರೆ????
    ಕಾಂಗರೂಗಳ ನಾಡಿಗೆ ಸ್ವಾಗತ.🙏

    ReplyDelete
  2. "ಪುರಚ್ಚಿ ತಲೈವಿ ಚಯಲಲಿದಾ ಮೊಹಂ ಮೇಲೆ ಒರು ಸುಕ್ಕಿ ಇರಂದದಿ" ಸಾರ್ ಈ ಪ್ಯಾರಾ ಮತ್ತೆ ಮತ್ತೆ ಓದಬೇಕು ಅನ್ನಿಸಿತು. ತಮಿಳರು ನುಡಿಯುವ ಕನ್ನಡ ಕೇಳಿದವರಿಗೇ ಗೊತ್ತು ಅದರ ಅನುಭವ. Sooper

    ReplyDelete

Post a Comment