ಸೀನೂಪಂಡಿತರ ರೋಗನಿವಾರಣೋಪಾಯಗಳು

ಸೀನೂಪಂಡಿತರ ರೋಗನಿವಾರಣೋಪಾಯಗಳು

ಹಾಸ್ಯ ಲೇಖನ - ಅಣುಕು ರಾಮನಾಥ್

 


ಅಂತಿಂಥ ಮದ್ದು ನಮದಲ್ಲ ನಮ್ಮಂಥ ಮದ್ದು ಇನ್ನಿಲ್ಲ

ಎಂತೆಂಥ ರೋಗ ಬಂತಲ್ಲ ಎಲ್ಲಕ್ಕು ಮದ್ದು ಉಂಟಲ್ಲ

ಮತ್ತೆಂದು ಜಡ್ಡು ಬರದಲ್ಲ ನಮ್ಮೌಷಧಕ್ಕೆ ಸಮವಿಲ್ಲ

ಅಂತಿಂಥ ಮದ್ದು ನಮದಲ್ಲ ನಮ್ಮಂಥ ಮದ್ದು ಇನ್ನಿಲ್ಲ

ಎಂದು ಹಾಡುತ್ತಾ ‘ಆಲ್ರೌಂಡ್ ವೈದ್ಯ’ ಸೀನೂಪಂಡಿತರು ಆಗಮಿಸಿದರು. ಸೀನೂಪಂಡಿತರು ನನ್ನ ತಾತನ ಕಾಲದಿಂದಲೂ ನಮ್ಮ ಮನೆವೈದ್ಯರು. ತಾತನ ಅಣ್ಣತಮ್ಮಂದಿರು ಇವರ ಪ್ರಾಕ್ಟೀಸಿಗೆ ಬಲಿಯಾಗಿ ಮುತ್ತಾತನ ಆಸ್ತಿಗೆ ತಾತನೇ ವಾರಸುದಾರನಾಗಲು ಪ್ರಮುಖ ಕಾರಣರಾದ ಪಂಡಿತರನ್ನು ಕಂಡರೆ ತಾತನಿಗೆ ಅಚ್ಚುಮೆಚ್ಚು. ಹಳೆಯ ಕಾಲದವರಾದ್ದರಿಂದ ಇನ್ನೂ ಗಟ್ಟಿಮುಟ್ಟಾಗಿಯೇ ಇದ್ದ ಅವರದು ಹದ್ದಿನ ದೃಷ್ಟಿ, ನಾಯಿಯ ಮೂಗು, ಆನೆಯ ಸ್ವರ, ತೋಳದ ಹೊಟ್ಟೆ. ಇಷ್ಟೆಲ್ಲ ಪ್ರಾಣಿಗಳ ಕೊಲಾಬೊರೇಷನ್ ಆದ ಪಂಡಿತರನ್ನು ಬರಮಾಡಿಕೊಳ್ಳುತ್ತಾ “ಏನ್ವಿಷಯ?” ಎಂದೆ.

“ಕೊರೋನಾಗೆ ಔಷಧ ಕಂಡುಹಿಡಿದೆ” ಎಂದರು.

“ಬಂದೂಕದ ಕವರ್, ಮೇಣದ ಬತ್ತಿಯನ್ನು ಒಳಕ್ಕೆ ತೆಗೆದುಕೊಳ್ಳಲು ಆದೇಶ ಇವುಗಳು ಗೊತ್ತು. ನಿಮ್ಮ ಔಷಧದ್ದೇನು ಗತ್ತು?” ಎಂದೆ.

“ಎಂಥ ಮಾತೋ ನಿನ್ನದು?”

“ಬಂದೂಕದ ಕವರ್ ಎಂದರೆ ಕೋವಿ-ಷೀಲ್ಡ್; ಮತ್ತೊಂದು ಕೋ ವ್ಯಾಕ್ಸ್ ಇನ್” ಎಂದೆ.

“ಅವೆಲ್ಲ ಈಗಿನ ಕಾಲದವರದು. ನಂಬಕ್ಕಾಗಲ್ಲ. ನಾನು ನಿಮ್ಮ ತಾತನ ಊರಿನಲ್ಲಿ ಪ್ಲೇಗ್ ಬಂದಿದ್ದಾಗ ಔಷಧಿ ಕೊಟ್ಟಿದ್ದೆ”

“ತೊಗೊಂಡವ್ರು ಏನಾದರು?”

“ನೂರಾರು ಸಂಖ್ಯೆಯಲ್ಲಿ ಸತ್ತವು”

ರೋಗಿಯೊಬ್ಬನ ಮರಣೋತ್ತರ ವರದಿಯ ಫಾರ್ಮ್ ತುಂಬುವಾಗ ‘ಕಾಸ್ ಆಫ್ ಡೆತ್’ ಎಂಬ ಕಾಲಂನಲ್ಲಿ ವೈದ್ಯನೊಬ್ಬ ತನ್ನ ಹೆಸರನ್ನು ಬರೆದಿದ್ದುದನ್ನು ಕೇಳಿದ್ದೆ. ಆದರೆ ಹೀಗೆ ನೂರಾರು ಸಾವುಗಳನ್ನು ಹೆಮ್ಮೆಯಿಂದ ಹೇಳಿಕೊಂಡ ವೈದ್ಯ ಇವರೇ ಮೊದಲು!

“ಅಷ್ಟೊಂದು ಜನರನ್ನು ಕೊಂದಿರೆ? ಗಲ್ಲುಶಿಕ್ಷೆ ವಿಧಿಸಲಿಲ್ಲವೆ?”

“ಅದೇ ತಮಾಷೆ ನೋಡು. ಪ್ಲೇಗ್ ವಾಸಿಯಾಗಲಿ ಅಂತ ಅದ್ಯಾವುದೋ ಬೇರನ್ನ ಅರೆದು ಪುಡಿ ಮಾಡಿ ಇನ್ಯಾವುದೋ ಬೇರಿಗೆ ಸೇರಿಸಿ ಕುದಿಸಿ ಚಿರೋಟಿ ರವೆಯಲ್ಲಿ ಮಾಡಿದ ಉಪ್ಪಿಟ್ಟಿನ ಹದಕ್ಕೆ ಮುದ್ದೆಮುದ್ದೆಯಾದ ಪೇಸ್ಟನ್ನು ರೋಗಿಗಳಿಗೆ ಕೊಟ್ಟೆ. ಊರಿನಿಂದ ಗುಳೆ ಹೋಗಿ ಜಮೀನಿನಲ್ಲಿ ಮನೆ ಮಾಡಿಕೊಳ್ಳುವ ತರಾತುರಿಯಲ್ಲಿ ಅವರು ಪೇಸ್ಟ್ ತೆಗೆದುಕೊಂಡುಹೋಗಲು ಮರೆತರು. ಖಾಲಿ ಮನೆಗಳಿಗೆ ನುಗ್ಗಿದ ಇಲಿಗಳು ಹೆಗ್ಗಣಗಳು ಇವನ್ನು ತಿಂದದ್ದೇ ತಿಂದದ್ದು, ಸಾಮೂಹಿಕವಾಗಿ ನೆಗೆದುಬಿದ್ದವು. ಇದೋ ಆಗಿನ ಪಂಚಾಯತ್ ಚೇರ್ಮನ್ ಕೊಟ್ಟ ಪ್ರಶಸ್ತಿಪತ್ರ” ಎನ್ನುತ್ತಾ ತಮ್ಮ ಕೈಚೀಲದಿಂದ ಹಳೆಯಾತಿಹಳೆಯ ಪತ್ರವೊಂದನ್ನು ಹೊರತೆಗೆದರು. ಮಾಸಿದ ಅಕ್ಷರಗಳ ನಡುನಡುವೆ “ಮೂಷಿಕವಿಧ್ವಂಸಕ”,  “ಪ್ಲೇಗುನಿವಾರಕ” “ಹೆಗ್ಗಣಕುಲಾಂತಕ” ಎಂಬ ಬಿರುದುಗಳು ರಾರಾಜಿಸಿದವು.

“ರೋಗದ ಮೂಲವನ್ನ ಕಂಡುಹಿಡಿದು ಅದನ್ನ ಇಲ್ಲವಾಗಿಸೋದು ನನ್ನ ವೈದ್ಯಕೀಯದ ಸ್ಪೆಷಾಲಿಟಿ ಕಣಯ್ಯ. ಪ್ಲೇಗಿಗೆ ಮೂಲ ಇಲಿ” ಎಂದು ಒಂದೊಮ್ಮೆ ಮೀಸೆ ಇದ್ದ ಕಡೆ ಮೀಸೆ ತಿರುವುವ ರೀತಿಯಲ್ಲಿ ಬೆರಳುಗಳನ್ನು ಕುಣಿಸಿದರು.

“ಭೇಷ್ ಪಂಡಿತರೆ. ಈಗ ಬಂದ ಕಾರಣ?” ಎಂದೆ. ವಯಸ್ಸಾದವರನ್ನು ನಾವು ಬೇಕಾದ್ದು ಕೇಳಬಹುದು. ಅವರು ಅವರಿಗೆ ಅನಿಸಿದ್ದನ್ನು ಹೇಳಬಹುದು. ನಮ್ಮ ಮಾತಿಗೂ, ಅವರ ಕಥೆಗೂ ಸಂಬಂಧ ಇರಲೇಬೇಕೆಂಬ ನಿಯಮವಿರುವುದಿಲ್ಲ. ಈಗಲೂ ಹಾಗೆಯೇ ಆಯಿತು.

‘ಮೆಚ್ಚಬೇಕಾದ್ದೇ ಅನಾಫಿಲಿಸ್‌ನ” ಎಂದರು ಪಂಡಿತರು.

“ಅಂತಹ ಗುಣವೇನಿದೆ ಅದರಲ್ಲಿ?”

“ಈಗಿನ ಚಿಲ್ರೆ ಸೊಳ್ಳೆಗಳು ಚಿಕೂನ್ ಗುನ್ಯಾದಂತಹ ‘ನಾನ್ ಮಾರ್ಬಿಡ್’ ಕಾಯಿಲೆಗಳನ್ನು ಹರಡುತ್ತವೆ. ಕೈ ಸೆಟೆದು, ಮಂಡಿ ನೇರವಾಗಿ, ಸ್ವಲ್ಪ ಕಾಲ ಒದ್ದಾಡಿದನಂತರ ಮನುಷ್ಯ ಹಿಂದಿನಹಾಗೆ ಆಗುತ್ತಾನೆ. ಅನಾಫಿಲಿಸ್ ಆ ತರಹ ಇರಲಿಲ್ಲವಯ್ಯ... ಇಡೀ ಖಾನ್‌ದಾನ್ ಖಾಲಿ ಮಾಡೋ ತಾಕತ್ತಿತ್ತು. ಅದಕ್ಕೆ ನಾನು ಮಾಡಿದ ವೈದ್ಯಕೀಯ...”

“ಲೇಹ್ಯ ಕೊಟ್ಟಿರೇನು?”

“ಎಷ್ಟು ಚೆನ್ನಾಗಿ ಊಹಿಸಿದೆಯಯ್ಯ! ಕರಾಚಿಯಿಂದ ಕೆಸರು ತರಿಸಿ, ಬೆಳಗಾವಿಯಿಂದ ಬೆಣಚುಕಲ್ಲು ತರಿಸಿ, ಆ ಕಲ್ಲಿನ ಮೇಲೆ ಈ ಕೆಸರನ್ನು ಹರಡಿ ತುರುಚಿಸೊಪ್ಪಿನ ರಸವನ್ನು ತೇಯ್ದು, ಕೊಂಚ ಗಂಧ ಬೆರೆಸಿ, ಮರದಿಂದ ಹೊಮ್ಮಿದ ಗೋಂದನ್ನು ಸೇರಿಸಿ ಉಂಡೆ ಕಟ್ಟಿದೆ. ಹೇಗಿತ್ತೂಂತೀಯ... ಟಾರ್... ಟಾರ್ ಮೆತ್ತಿದಹಾಗೆ ಮೆತ್ತುತ್ತಿತ್ತು ಕೈಗೆ. ಅದನ್ನ ಮಲಗುವವರ ಎಡಕಿವಿ, ಬಲಕಿವಿಯ ಹತ್ತಿರ ಇಟ್ಟರೆ ಸಾಕು, ಸಂಗೀತದ ರಾಗಗಳನ್ನು ಪ್ರಾಕ್ಟೀಸ್ ಮಾಡಿಕೊಳ್ಳಲು ಬರುವ ಸೊಳ್ಳೆಗಳು ಇವುಗಳಿಂದ ಆಕರ್ಷಿತವಾಗಿ ಮೇಲೆ ಕೂರುತ್ತಲೇ ಇವಕ್ಕೆ ಅಂಟಿಕೊಂಡುಬಿಡುತ್ತಿದ್ದವು. ಮರುದಿನ ಬೆಳಗ್ಗೆ ಇವೆಲ್ಲವನ್ನೂ ಸಜೀವವಾಗಿ ‘ಸೊಳ್ಳೆಗೋರಿ’ಯಲ್ಲಿ ಹೂಳುತ್ತಿದ್ದರು. ಸೊಳ್ಳೆ ಕಡಿಮೆಯಾದಂತೆ ಮಲೇರಿಯಾ ಕಡಿಮೆಯಾಯಿತು. ಅಲ್ಲೊಂದಷ್ಟು ಇಲ್ಲೊಂದಿಷ್ಟು ಉಳಿದುಕೊಂಡಿದ್ದ ಬ್ರಿಟಿಷರು ನನ್ನ ಕರಾಮತ್ತನ್ನು ಕಂಡು “ಮಸ್ಕಿಟೋ ಮರ್ಡರರ್ ಅವಾರ್ಡ್” ಕೊಟ್ಟರು.”

“ವೆರಿಗುಡ್”

“ಹೆಚ್೧ಎನ್೧ ಬಂದಾಗಿನ ಟ್ರೀಟ್ಮೆಂಟಂತೂ ಕ್ರಾಂತಿಯನ್ನೇ ಎಬ್ಬಿಸಿಬಿಡ್ತು”

“ಯಾವ ಟ್ರೀಟ್ಮೆಂಟ್ ಅದು?”

“ಅದು ಹರಡುತ್ತಿದ್ದದ್ದೇ ಹಂದಿ ಸೀನುವುದರಿಂದ. ಹಂದಿ ಸೀನಕ್ಕೆ ಅಲರ್ಜಿಯೇ ಕಾರಣ ಅಂತ ಕಂಡುಹಿಡಿದು ಹಂದಿಗಳನ್ನೆಲ್ಲ ಏರ್ ಕಂಡೀಷನ್ಡ್ ರೂಮಲ್ಲಿ ಇರಿಸಿ, ಮೂಗಿಗೆ ಬಟ್ಟೆ ಕಟ್ಟಿಬಿಟ್ಟೆ. ಸೀನಿದರೂ ಬಟ್ಟೆಯಲ್ಲೇ ಸ್ಟಾಕ್ ಆಗುತ್ತಿದ್ದರಿಂದ ರೋಗ ಹರಡೋದು ನಿಂತ್ಹೋಗಿ ನನಗೆ ‘ಸೂಕರಪ್ರವೀಣ’ ಬಿರುದೂ ಬಂತು”

“ಕೊರೊನಾಗೆ ಔಷಧಿ ಕಂಡುಹಿಡಿದೆ ಅಂದ್ರಿ” ಮಾತನ್ನು ಹಾದಿಗೆ ತರಲೆತ್ನಿಸಿದೆ.

“ವಾಸ್ತವವಾಗಿ ಅದು ಔಷಧಿಯಲ್ಲ, ನಾಶಕ್ಕೊಂದು ಉಪಾಯ”

“ಅರಿಶಿನ ಕೊಂಬಿನಿಂದ ಕೊರೊನಾಗೆ ಹೊಡೆಯುವುದೇನು?”

“ಅದನ್ನು ಟ್ರೈ ಮಾಡಿದೆ. ಅರಿಶಿನ ಹಚ್ಚಿಕೊಂಡ ವೈರಾಣುಗಳು ಅನಗತ್ಯವಾಗಿ ಬೆಳೆದಿದ್ದ ಕೂದಲುಗಳನ್ನು ಕಳೆದುಕೊಂಡು ಕ್ಲೀನ್ ಶೇವನ್ ಆಗಿ ಮತ್ತಷ್ಟು ಹುರುಪಿನಿಂದ ಓಡಾಡಿದ್ದನ್ನು ಕಂಡು ಅರಿಶಿನಚಿಕಿತ್ಸೆ ಕೈಬಿಟ್ಟೆ”

“ನಿಂಬೆಹಣ್ಣು?”

“ಒಳ್ಳೆಯ ಔಷಧಿ ಕಣಯ್ಯ. ಮಾಜಿ ಪ್ರಧಾನಿಗಳ ಮಗ ತಮ್ಮೆಲ್ಲ ಕಷ್ಟಗಳನ್ನು ನಿವಾರಿಸಿಕೊಂಡಿದ್ದೇ ನಿಂಬೆಹಣ್ಣಿನನಿಂದ. ನಿಂಬೆಹಣ್ಣಿನಲ್ಲಿ ಶತ್ರುನಾಶಕ ಶಕ್ತಿಯಷ್ಟೇ ಅಲ್ಲದೆ ಜನಾಕರ್ಷಕ ಸಾಮರ್ಥ್ಯವೂ ಇದೆ”

“ಜನಾಕರ್ಷಕವೇ?”

“ಹೂಂ. ‘ನಿಂಬೆಹಣ್ಣಿನಂಥ ಹುಡುಗಿ ಬಂತು ನೋಡು’ ಅಂತ ಶುರು ಹಚ್ಕೊಂಡಿದ್ದಕ್ಕೇ ರವಿಚಂದ್ರನ್ ಅಷ್ಟೊಂದು ಫೇಮಸ್ ಆಗಿದ್ದು. ಜನಪದಗೀತೆಗಳ ಕಾಲದಿಂದಲೂ ಮಾವು, ಸೀಬೆ, ಹಲಸು ಎಲ್ಲಕ್ಕಿಂತಲೂ ನಿಂಬೇನೇ ಗ್ರೇಟ್”

“ಹೇಗೆ ಹೇಳ್ತೀರಿ?”

“ಮಾವಿನ ಬನಾದ ಮ್ಯಾಗೆ, ಸೀಬೆಯಾ ಬನಾದ ಮ್ಯಾಗೆ ಅನ್ನೋ ಹಾಡುಗಳೇ ಇಲ್ಲ. ನಿಂಬಿಯಾ ಬನಾದ ಮ್ಯಾಗೆ ಅಂತಾನೇ ಇರೋದು”

“ನಿಂಬೆಯನ್ನ ಕೊರೊನಾ ಮಂದಿಗೆ ಹೇಗೆ ಕೊಡಬೇಕು?”

“ಮೂಗಿನ ಅಳತೆಗೆ ತಕ್ಕಂತಹ ನಿಂಬೆಯನ್ನ ತೊಗೊಂಡು ಮೂಗಿಗೆ ವೆಡ್ಜ್ ಮಾಡಿಬಿಡಬೇಕು”

“ಜನ ಸಾಯಲ್ವಾ?”

“ಯಾಕ್ಸಾಯ್ಬೇಕು? ಬಾಯಲ್ಲಿ ಉಸಿರಾಡಿದರಾಯ್ತಪ್ಪ!”

“ಮೂಗು ಬಂದ್ ಯಾಕೆ?”

“ಮೂಗಿನಿಂದಲೇ ವೈರಸ್ ಒಳಹೋಗೋದಂತೆ. ಎಂಟ್ರೆನ್ಸ್ ಕ್ಲೋಸ್ ಮಾಡ್ಬಿಟ್ರೆ ರೋಗವೇ ಲಾಕ್‌ಡೌನ್ ಆಗ್ಬಿಡತ್ತೆ”

“ನೀವು ನಿಂಬೆಹಣ್ಣಿನ ಔಷಧಿಯನ್ನೇ ರೋಗಿಗಳಿಗೆ ಕೊಡುತ್ತಿದ್ದೀರೇನು?”

“ಊಹೂಂ. ರೋಗಿಗಳ ಮೂಗಳತೆ ತೊಗೊಳಕ್ಕೇಂತ ಟೇಪು ಹಿಡಿದಾಗ ಅವರು ಸೀನಿಬಿಟ್ಟರೆ ನಮ್ಮ ಮೇಲೆ ವೈರಸ್ ಅಟ್ಯಾಕ್ ಆಗೋದ್ರಿಂದ ರಿಸ್ಕ್ ಜಾಸ್ತಿ. ಅದಕ್ಕೇ ಬೇರೆಯದೇ ಉಪಾಯ ಮಾಡಿದ್ದೀನಿ”

“ಏನು?”

“ಮಾತಾ ಕೋವಿಡಮ್ಮ ಪೂಜಾವಿಧಿ” ಬೀಗಿದರು ಪಂಡಿತರು.

“ಕೋವಿಡ್ ಹೆಣ್ಣೆಂದು ಏಕೆ ನಿರ್ಧರಿಸಿದಿರಿ?”

“ಎಲ್ಲರ ಗಮನವನ್ನು ಸೆಳೆಯುವ ಶಕ್ತಿ ಇರುವುದು ಹೆಣ್ಣಿಗೇ”

“ಏನದು ಪೂಜಾವಿಧಿ?”

“ದಿನ ಬೆಳಗಾದರೆ ಓಂ ಕಿರೀಟರೂಪಿಣೈ ನಮಃ ಪಾದಂ ಪೂಜಯಾಮಿ; ರೂಪಾಂತರ ಪ್ರವೀಣಾಯೈ ನಮಃ ಊರುಂ ಪೂಜಯಾಮಿ; ದೇಶನಾಶಿನೈ ನಮಃ ಹಸ್ತಂ ಪೂಜಯಾಮಿ; ಜಗಪ್ರವಾಸ ನಿರತಾಯೈ ನಮಃ ಸರ್ವಾಂಗಪೂಜಾAಚ ಕರಿಷ್ಯೇ” ಎಂದು ದಿನಕ್ಕೆ ಆರುಬಾರಿ ಪಠಿಸಿ ಕಿರೀಟರೂಪಿ ಪ್ರತಿಮೆಯೊಂದನ್ನು ಮಣ್ಣಿನಲ್ಲಿ ಮಾಡಿ ಅದಕ್ಕೆ ಸ್ಯಾನಿಟೈಜರ್ ಪ್ರೋಕ್ಷಣೆ ಮಾಡಿ ಆರು ಅಡಿ ದೂರದಿಂದ ಸಾಷ್ಟಾಂಗ ನಮಸ್ಕಾರ ಮಾಡಿದರೆ ಹದಿನಾಲ್ಕೇ ದಿನಗಳಲ್ಲಿ ರೋಗ ಮಾಯವಾಗುತ್ತದೆ” ಎಂದರು.

“ಇದಕ್ಕೂ ವಾಸಿಯಾಗದಿದ್ದರೆ?” ಅನುಮಾನದ ಬೀಜ ಬಿತ್ತಿದೆ.

“ತಬ್ಲಿಘಿ, ಕುಂಭಮೇಳ, ಚುನಾವಣೆ ಇಷ್ಟನ್ನೂ ಒಟ್ಟಿಗೆ ನಡೆಸಿಬಿಡುತ್ತೇನೆ. ಒಂದೇ ತಿಂಗಳಲ್ಲಿ ರೋಗ ಹರಡುವುದು ನಿಂತುಹೋಗುತ್ತದೆ”

“ಅದು ಹೇಗೆ?” ಆಶ್ಚರ್ಯಚಕಿತನಾದೆ.

“ರೋಗ ಹರಡಲು ಜನ ಇರಬೇಕು. ಅಷ್ಟೆಲ್ಲ ಒಟ್ಟಿಗೆ ಮಾಡಿದರೆ ನಾನೂ ಮಾಯ, ನೀನೂ ಮಾಯ, ಜಗವೇ ಮಾಯ” ಎಂದರು ಪಂಡಿತರು.

ಪಂಡಿತರ ಘೋರ ಉಪಾಯಗಳನ್ನು ಕೇಳಿ ಬೆಚ್ಚಿಬೀಳುವುದಕ್ಕಿಂತ ಬ್ರೇಕಿಂಗ್ ನ್ಯೂಸ್ ನೋಡುವುದೇ ವಾಸಿಯೆನ್ನುತ್ತಾ ಟಿವಿ ರಿಮೋಟ್ ಕೈಗೆತ್ತಿಕೊಂಡೆ. 


Comments

  1. can`t stop laughing about the home made recipes. only our generation know about the glue from the tree sir. it was nostalgic & thoughtful. very nice one

    ReplyDelete
  2. ಅಬ್ಬಾ ಪಂಡಿತರೇ! ಖಂಡಿತ ಇವರಿಗೆ ಘೋರೋಪಾಯ ಪಂಡಿತರೆಂಬ ಬಿರುದು ಕೊಡಲೇ ಬೇಕು. ಒಳ್ಳೆಯ ಹಾಸ್ಯ ಬರಹ

    ReplyDelete
  3. ರಾಮಣ್ಣೋರು ಇನ್ನೂ ಮುಟ್ಟದ ವ್ಯಕ್ತಿ ವಿಷಯಗಳಿದೆಯಾ ? ಯಾರ್ಯಾರನ್ನೋ ತಮ್ಮ ಲೇಖನದ ಬೀದಿಗೆ ಎಳೆದ ನೀವು ಪಾಪ ಪಂಡಿತರು ಸಿಕ್ಕರೆ ಬಿಡುತ್ತೀರೇ ? ವೈರಸ್ ನಿಂದ ತಮ್ಮ ಹೊಳೆಯುವ ತಲೆಯಲ್ಲಿ ಮುಗಿಯದಷ್ಟು ಹೊಸ ಬಗೆಯ ಹಾಸ್ಯ ಹೊಳೆ - ಹೊಳೆದು ಹೋಳೆಯಾಗಿ ಹರಿದಿದೆ .

    ReplyDelete

Post a Comment