ಕಡಲೆ ಕರೆಯಿತು; ಘಮವು ಸೆಳೆಯಿತು

ಕಡಲೆ ಕರೆಯಿತು; ಘಮವು ಸೆಳೆಯಿತು

ಹಾಸ್ಯ ಲೇಖನ - ಅಣಕು ರಾಮನಾಥ್ 



“ಎಲ್ಲೋ ಇದು ಎಲ್ಲೋ ಹೊಸ ಪ್ರೇಮರಾಗ” ಎಂಬ ಹಾಡು ಕೇಳಿದಾಗಲೆಲ್ಲ ನನಗೆ ಬಸವನಗುಡಿಯ ಶ್ರೀನಿವಾಸ ಬ್ರಾಹ್ಮಿನ್ಸ್ ಬೇಕರಿಯ ಕಾಂಗ್ರೆಸ್ ಕಡಲೆಕಾಯಿಬೀಜ ನೆನಪಾಗುತ್ತದೆ. Yellow ಬಣ್ಣದ ಕಡಲೇಕಾಯಿಬೀಜವನ್ನು ಕಂಡರೆ ಕುರುಕುಬಾಯಿಗಳಿಗೆ ಅಪರಿಮಿತ ಪ್ರೀತಿ. “ಅತಿಮಧುರ ಹದಖಾರ; ಕಾಂಗ್ರೆಸು ಕಡಲೆ ಯೋಗ! ಸಮ ರಸದ ವೈಭೋಗ; ತಿನ್ನಲು ಸಿಗುವುದೆ ಈಗ?” ಎಂದು ಚಪಲಜಿಹ್ವೆಗಳು ವಿದೇಶದಿಂದಲೂ ಬಂದು ಎಡತಾಕುತ್ತವೆ.  ಆ ಅಂಗಡಿಯ ಮುಂದೆ ಹಾದು ಹೋಗುವಾಗಲೆಲ್ಲ 

ಕಡಲೆ ಕರೆಯಿತು; ಘಮವು ಸೆಳೆಯಿತು

ಹತ್ತು ರುಚಿಪ್ರಿಯ ಮೆಟ್ಟಿಲ |

ಕೊಳ್ಳು ಮಿಶ್ರಣ ಮೆಲ್ಲು ಅನುದಿನ

ಎನ್ನುತಿಹುದೈ ನಾಲಿಗೆ | 

ಓ ಬೆಲೆ ಲೆಸ್ಸೋ | ಓ ಬೆಲೆ ಲೆಸ್ಸೋ | ಓ ಬೆಲೆ ಲೆಸ್ಸೋ | 

ಎಂದು ನನ್ನ ಮನಸ್ಸು ಗುನುಗುತ್ತದೆ. ಅಂತಹ ರುಚಿಗೆ ನಾವು ಕೊಡುವ ಬೆಲೆ ಲೆಸ್ಸೇ!

ಅಂದೆಂದೋ ಕಾಂಗ್ರೆಸ್ ಪಕ್ಷವು ‘Toast of the Nation’ ಆಗಿದ್ದ ಕಾಲದಲ್ಲಿ ಈ ತಿನಿಸನ್ನು ‘Taste of the Nation’ ಎಂದು ಗುರುತಿಸಿದ್ದರೋ ಏನೋ. ತತ್ಕಾರಣ ಅದಕ್ಕೆ ಕಾಂಗ್ರೆಸ್ ಎಂಬ ಹೆಸರು ಬಂದಿದ್ದೀತು. ಕಾಲ ಬದಲಾದಂತೆ ಅದನ್ನು ಭಾಜಪ ಕಡಲೆಕಾಯಿಬೀಜ ಎಂದೋ, ಜೆಡಿಎಸ್ ಕಡಲೆಕಾಯಿಬೀಜ ಎಂದೋ, ಕನ್ನಡಪಕ್ಷದ ಕಡಲೆಕಾಯಿಬೀಜ ಎಂದೋ ಕರೆಯಲಿಲ್ಲವೇಕೆ ಎಂಬ ಪ್ರಶ್ನೆಗೆ “ಈ ತಿನಿಸು ಅಂದಿನ ಕಾಂಗ್ರೆಸ್ ಪಕ್ಷದವರ ಪ್ರತಿನಿಧಿಯಾಗಿದೆ. ಸಾಕಷ್ಟು ಖಾರ ಇರುವ ಈ ಬೀಜವು ಕಾಂಗ್ರೆಸಿಗರಂತೆಯೇ ಬ್ರಿಟಿಷರ ಸಪ್ಪೆಬಾಯಿಗೆ ನುಂಗಲಾರದ ತುತ್ತಾಗಿತ್ತು” ಎಂಬ ವಾದವೊಂದಿದೆ. “ಕಡಲೆಕಾಯಿಬೀಜದ ತಯಾರಿಕೆ ಶುರುವಾಗಿದ್ದೇ ಬ್ರಿಟಿಷರ ಕಾಲದಲ್ಲಿ. ಇದಕ್ಕೂ ಮುಂಚೆ ಇಡೀ ಕಡಲೆಬೀಜಕ್ಕೆ ಖಾರವನ್ನು ಲೇಪಿಸಿ ಕೊಡುತ್ತಿದ್ದರು. ಬ್ರಿಟಿಷರದು ಡಿವೈಡ್ & ರೂಲ್ ಪಾಲಿಸಿ ಆದ್ದರಿಂದ ಶ‍್ರೀನಿವಾಸ ಬೇಕರಿಯವರು ‘A taste of their own medicine’ ಹೇಗಿರುವುದೆಂದು ಬ್ರಿಟಿಷರಿಗೆ ತೋರಿಸಲೆಂದೇ ಕಡಲೆಬೀಜವನ್ನು ಡಿವೈಡ್ ಮಾಡಿ, ಖಾರವನ್ನು ಬೆರೆಸಿ, “ಬ್ರಿಟಿಷರೇ, ನಿಮ್ಮ ಸರ್ಕಾರವೂ ನಮಗೆ ಇಷ್ಟೇ ಖಾರ” ಎಂದು ತೋರಿಸುವ ಉದ್ದೇಶದಿಂದ ಈ ಮಿಶ‍್ರಣವನ್ನು ತಯಾರಿಸಿದರು” ಎಂದು ಅಂದಿನ ದೃಢದಂತಿ, ಇಂದಿನ ಬೊಚ್ಚುಬಾಯಿ ಆದ ತಿರುವೆಂಗಡನ್ ಅಯ್ಯಂಗಾರ್ ಮೊನ್ನೆಯಷ್ಟೇ ನೆನಪಿನ ದೋಣಿಯಲ್ಲಿ ಸಾಗುತ್ತಾ ನುಡಿದಿದ್ದಾರೆ. 

“ಅವರ ನೆನಪಿನ ದೋಣಿಯಲ್ಲಿ ಹಲಗೆಗಿಂತ ರಂಧ್ರಗಳೇ ಜಾಸ್ತಿ. ಗೊಂದಲಜಲ ತುಂಬಿದ ದೋಣಿಯದು” ಎಂದು ಕೆಲವರು ಕಡಲೆಕಾಯಿಬೀಜಕ್ಕಿಂತ ಹೆಚ್ಚು ಖಾರವಾಗಿ ನುಡಿಯುವುದು ಅವರ ಮೇಲಿನ ಮಾತ್ಸರ್ಯಕ್ಕಷ್ಟೇ ಎಂದು ಬಲ್ಲ ಮೂಲಗಳು ತಿಳಿಸಿವೆ. 

ವಾಸ್ತವವಾಗಿ ಬ್ರಿಟಿಷರು ಹೋದಮೇಲೆ ಅವರದೇ ಡಿವೈಡ್ & ರೂಲ್ ಪಾಲಿಸಿಯನ್ನು ನಮ್ಮ ಸರ್ಕಾರಗಳು ಪಾಲಿಸಿದವು. ಭಾಷಾwar ಪ್ರಾಂತ್ಯಗಳಾಗಿ ವಿಂಗಡಿಸಲ್ಪಟ್ಟ ಪ್ರದೇಶಗಳನ್ನು ರಾಜ್ಯಗಳೆಂದು ಗುರುತಿಸುವುದು ಡಿವೈಡ್ & ರೂಲ್ ಪಾಲಿಸಿಯೇ. ಗುಂಡುಕಡಲೆಯಂತಿದ್ದ ದೇಶವನ್ನು ಭಾಗವಾದ ಕಡಲೆಯಂತಾಗಿಸಿದ್ದನ್ನು ಕಡೆಲೇಕಾಯಿಬೀಜವು ಬಿಂಬಿಸುತ್ತದೆ ಎಂಬ ಮಾತೂ ಇದೆಯಂತೆ. ಆದರೆ “1956ರಲ್ಲಿ ಮೈಸೂರು ರಾಜ್ಯದ ಉದಯವಾಯಿತು. ‘ಸರ್ವಜನಾಂಗದ ಶಾಂತಿಯ ತೋಟ’ ದಲ್ಲಿ ‘ರಸಿಕರ ಕಂಗಳ ಸೆಳೆಯುವ ನೋಟ’ವಾಗಿ ಈ ಕಡೆಲೇಬೀಜವನ್ನು ತಯಾರಿಸಲಾಯಿತು. ‘ಹಿಂದೂ ಕ್ರೈಸ್ತ ಮುಸಲ್ಮಾನ’ರಾದಿಯಾಗಿ ಎಲ್ಲರೂ ಇದನ್ನು ಆಸ್ವಾದಿಸಿದರು. ‘ಕರುನಾಡೆನೆ ಕಡಲೆಯಂತೆ ಗಟ್ಟಿ; ಬಿಡಿಬಿಡಿಯಾಗಿದ್ದರೂ ಒಟ್ಟಾಗಿರುವುದು ಇಲ್ಲಿನ ಸಂಸ್ಕೃತಿ; ಮಾತಿನಲ್ಲಿ ಖಾರ ಇದ್ದರೂ ಹೃದಯದಿಂದ ಸರ್ವರಿಗೂ ರುಚಿಸುವರು” ಎನ್ನುವುದನ್ನು ಗಟ್ಟಿಯಾಗಿದ್ದೂ ಪ್ಯಾಕೆಟ್ಟಲ್ಲಿ ಒಟ್ಟಾಗುವ, ಖಾರವಿದ್ದೂ ಮತ್ತೂ ಬೇಕೆನಿಸುವ ಕಡಲೇಬೀಜಕ್ಕಿಂತ ಮತ್ತಾವುದೂ ಸ್ಪಷ್ಟವಾಗಿ ತೋರಿಸಲಾರದು. 



ಸಾಹಿತ್ಯದ ರುಚಿಗೆ ಕೊಟ್ಟಷ್ಟೇ ಒತ್ತನ್ನು ನಾಲಿಗೆಯ ರುಚಿಗೂ ಕೊಡುವ ಸಾಹಿತಿಗಳಿದ್ದ ಕಾಲದಲ್ಲಿ ಉದಯಿಸಿದ ಈ ತಿನಿಸನ್ನು ತಿಂದ ಕವಿವರ್ಯರನ್ನು “ಹೇಗಿದೆ ಕಡಲೇಬೀಜ?” ಎಂದು ಕೇಳಿದರೆ ಏನೆಂದು ಉತ್ತರಿಸಬಹುದೆಂದು ಯೋಚಿಸುತ್ತಾ ಲೋಡಿಗೆ ಒರಗಿದೆ. ಮಂಪರಿನಲ್ಲಿ ಒಬ್ಬೊಬ್ಬರಾಗಿ ವಿವಿಧ ಕವಿಗಳು ಕಾಣಲಾರಂಭಿಸಿದರು. 

ಓ ಸಾಥೀರೇ ತೇರೇ ಬಿನಾ ಭೀ ಕ್ಯಾ ಜೀನಾ |

ಬಾಗೋಂಮೇ ಬಗೀಚೋಂಮೇ ಥೇಟರ್ ಕೀ ಬೇಂಚೋಂಪೇ 

ತೇರೇ ಬಿನಾ ಕುಛ್ ಕಹೀ ನಾ |

ತುಝ ಬಿನ್ ರಸಹೀನ್ ಬೀರ್ ಬೋತಲ್

ತುಝ ಬಿನ್ ಬೇಸ್ವಾದ್ ಹೈ ಯೇ ಶ್ಯಾಮ್ ರೇ | 

ತೇರೇ ತೀಖಾ ಸ್ವಾದ್ ಹಿ ಸ್ವಾದ್ ಹೈ 

ಬುಝಾ ನಹೀ ಕಭೀ ಚಾಹ್ ತೇರೇ | 

ತೇರೇ ಬಿನಾ ಮೇರಿ; ಮೇರೇ ಬಿನಾ ತೇರಿ 

ಏ ಜಿಂದಗೀ ಜಿಂದಗೀ ನಾ | ತೇರೇ ಬಿನಾ ಭೀ ಕ್ಯಾ ಜೀನಾ | 

ಎಂದು ಕೈಯಲ್ಲಿ ಹಿಡಿದ ಕಡಲೇಬೀಜದ ಪ್ಯಾಕೆಟ್ಟನ್ನೇ ದಿಟ್ಟಿಸುತ್ತಾ ‘ಮುಖದ್ದರ್ ಕಾ ಸಿಕಂದರ್’ ಚಿತ್ರದ ಗೀತೆಯನ್ನು ರಚಿಸಿದ ಅಂಜಾನ್ ಹಾಡುತ್ತಾ ಸಾಗಿದ. ಅವನ ಹಿಂದೆಹಿಂದೆಯೇ 

ಖಾರ ಕಳ್ಳೆ ಬೀಜದ್ಹಂಗೆ ಲೈಫು | ಕೆಜಿ ಕೇಳೋವ್ಳೆ ವೈಫು | 

ಕಣ್ತುಂಬ ನೀರು ನೀನ್ ಬಾಯಿಗೆ ಬಿದ್ರೆ | ಬಾಯ್ತುಂಬ ಘಂಘಂ ನಿನ್ ತಿಂತಾ ಇದ್ರೆ | 

ನಿಜ್ವಾಗ್ಲೂ | ನಿಜ್ವಾಗ್ಲೂ ಖಾರ್ವೇ ನನ್ನಿಷ್ಟದ್ ಟೇಸ್ಟು ನನ್ನಿಷ್ಟದ್ ಟೇಸ್ಟೂ | 

ಎಂದು ಭಟ್ಟರು ಕಾಂಗ್ರೆಸ್ ಮೆಲ್ಲುತ್ತಾ ನಡೆದುಹೋದರು. ಭಟ್ಟರು ಕೊಂಚ ದೂರ ಸಾಗುತ್ತಿದ್ದಂತೆಯೇ ಕೆ.ಎಸ್. ನರಸಿಂಹಸ್ವಾಮಿಗಳು ಪ್ರತ್ಯಕ್ಷರಾಗಿ 

ಅಂತಿಂಥ ಕಳ್ಳೆ ನೀನಲ್ಲ | ನಿನ್ನಂಥ ಕಳ್ಳೆ ಇನ್ನಿಲ್ಲ |

ಹಿಡಿಮಟ್ಟ ನಿಂತ ಬೀಜ್ದಲ್ಲಿ ಎಷ್ಟೊಂದು ಟೇಸ್ಟು ಅದರಲ್ಲಿ | 

ಗರಿಕರಿಯ ಬೇವು ಇದರಲ್ಲಿ ಇಂಗು ಘಮ ಮತ್ತು ಬಾಯಲ್ಲಿ | 

ಅಂತಿಂಥ ಕಳ್ಳೆ ನೀನಲ್ಲ | ನಿನ್ನಂಥ ಕಳ್ಳೆ ಇನ್ನಿಲ್ಲ

ಎನ್ನುತ್ತಾ ತಡೆತಡೆದು ನಡೆನಡೆದು ಸಾಗಿದರು. ಅವರ ಹಿಂದೆಯೇ ನಿಸಾರ್ ಅಹಮದ್‍ರ ಆಗಮನವಾಯಿತು. “ಮನಸು ಗಾಂಧಿಬಜಾರು” ಎಂದು ಬರೆದವನು ನಾನು. ಅದರಲ್ಲಿ ಒಂದು ಸ್ಟಾಂಜಾವನ್ನಾದರೂ ಈ ಕಡಲೇಬೀಜಕ್ಕೆ ಮೀಸಲಾಗಿ ಇರಿಸಿಬೇಕಾಗಿತ್ತು. ಈಗಲೂ ಕಾಲ ಮಿಂಚಿಲ್ಲ. 

ಹಳದಿಯ ಸಿರಿ ವರ್ಣದಲ್ಲಿ ಲೌಕಿಕ ರುಚಿ ಸೆಳವಿನಲ್ಲಿ 

ಹದಿ-ಮುದಿಯರ ಜಿಹ್ವೆಚಪಲ ಸಂಪೂರ್ಣದಿ ತಣಿಸುವಲ್ಲಿ 

ನಿತ್ಯಂ ಗರಂ ಗರಮ್ಮೆನುತ ವಿವಿಧ ಗಾತ್ರ ಪ್ಯಾಕೆಟಲ್ಲಿ 

ನಿತ್ಯೋತ್ಸವ ಗ್ರೌಂಡ್‍ನಟ್ ನಿತ್ಯೋತ್ಸವ... ನಿತ್ಯೋತ್ಸವ ರುಚಿಯ ನಿತ್ಯೋತ್ಸವ 

ಎಂದು ಆನ್ ದ ಸ್ಪಾಟ್ ಕವನವನ್ನು ರಚಿಸಿದರು. “ಒಂದು ವೇಳೆ ಇಂತಹ ಕಡಲೇಬೀಜ ಸಿಕ್ಕದಿದ್ದರೆ ಏನು ಮಾಡುವಿರಿ?” ಎಂದು ಕೇಳಿದೆ. “ಹುರಿಗಾಳು ಸಾರ್ ಹುರಿಗಾಳು; ಎಮ್ಮ ಬಾಯ್ಗೆ ಕುರುಕಲು” ಎನ್ನುತ್ತಾ ಸಾಗಿದರು. 

1976ರಿಂದ 1975ರ ವರೆಗೆ ದಿನನಿತ್ಯವೂ ಇದರ ಮುಂದೆ ಓಡಾಡುತ್ತಿದ್ದ ಡಿವಿಜಿಯವರು ಇದರ ರುಚಿಗೆ ಮಾರು ಹೋಗದಿದ್ದಾರೇ? ತನ್ನ ಸೋದರತ್ತೆಯಿಂದ ‘ಗುಂಡಂ ಭಂಡಂ | ತಿಂಡಿಕು ಚೋರಂ |’ ಎಂಬ ಖ್ಯಾತಿಯನ್ನು ಪಡೆದಿದ್ದ ಅವರು 

ಕಡಲೆ ತೈಲದ ಖಂಡ | ರುಚಿಯದರ ವೈಶಿಷ್ಟ್ಯ | 

ತಡೆಯೆ ನೀನ್ ಅದರ ಸ್ವಾದಕ್ಕೆ ಮಣಿವೆ ದಿಟ | 

ಗಡಣಕೋ ಕುಡಿತಕೋ ಹಿಡಿದು ನಡೆ ನೀ ಇದನು |

ಫುಡ್ಡಿನಲಿ ಬೆಸ್ಟಿದುವು ಮಂಕುತಿಮ್ಮ | 

ಎಂದು ನುಡಿದರು. ಮಾಸ್ತಿ, ನಾಡಿಗೇರ, ಎಂ.ವಿ.ಸೀ. ಎಲ್ಲರೂ ಕಡಲೇಬೀಜವನ್ನು ಕೊಂಡಾಡುವರೇ! “ಹಿಡಿಯಯ್ಯಾ ನಿನಗೂ ಒಂದಿಷ್ಟು” ಎನ್ನುತ್ತಾ ಮಾಸ್ತಿಯವರು ಪ್ಯಾಕೆಟ್ಟನ್ನು ನನ್ನ ಮುಂದೆ ಹಿಡಿದರು. ನಾನು ಮುಷ್ಟಿಯಷ್ಟನ್ನು ಪಡೆಯುವ ಆಸೆಯಿಂದ ಕೈಯನ್ನು ಪ್ಯಾಕೆಟ್ಟಿನೊಳಗೆ ತೂರಿದೆ. ಪ್ಯಾಕೆಟ್ಟು ಪರಪರ ಸದ್ದು ಮಾಡಿತು. 

ಸದ್ದಿಗೆ ಕಣ್ಬಿಟ್ಟೆ. ಕಣ್ಣೆದುರು ಆಗಷ್ಟೇ ಮಗಳು ತಂದಿರಿಸಿದ ಕಡಲೇಬೀಜದ ಪ್ಯಾಕೆಟ್ ಕೈಬೀಸಿ ಕರೆಯಿತು.  


Comments

  1. ನಿಮ್ಮ ಅಣಕುವಾಡುಗಳಿಗೆ ಎಲ್ಲ ವಿಷಯವೂ/ವಸ್ತುವೂ ಗ್ರಾಸವೇ! ಈ ಕಾಂಗ್ರೆಸ್ಸನ್ನು ಸ್ವಲ್ಪ ಸ್ವಲ್ಪವೇ ಸ್ವಾದಿಸಬೇಕು ಎಂದು ನನ್ನ ಅನಿಸಿಕೆ. ಅಂತೆಯೇ ನೀವು ಮಾರ್ಚಿ 25ರಂದು ತಂದುಕೊಟ್ಟ ಈ ಪರಮಾಯಿಷಿಯನ್ನು ನಾನು ಇದುವರೆಗೂ ಮುಗಿಸಿಲ್ಲ!

    ReplyDelete

Post a Comment